Saturday, August 13, 2022

Latest Posts

ಕೇರಳ ಚುನಾವಣೆ: ಕಾಸರಗೋಡಿನಲ್ಲಿ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರದಲ್ಲಿ ಎ.ಕೆ.ಎಂ.ಅಶ್ರಫ್ ಮುಸ್ಲಿಂಲೀಗ್ ಅಭ್ಯರ್ಥಿ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಮುಸ್ಲಿಂಲೀಗ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಸಂಜೆ ಘೋಷಿಸಿದೆ. 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು , ಭ್ರಷ್ಟಾಚಾರ ಪ್ರಕರಣದ ಆರೋಪಿ ವಿ.ಕೆ.ಇಬ್ರಾಹಿಂ ಕುಂಞ ಮತ್ತು ವಂಚನಾ ಪ್ರಕರಣದ ಆರೋಪಿ ಎಂ.ಸಿ.ಖಮರುದ್ದೀನ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಕಳಮಶ್ಶೇರಿಯಲ್ಲಿ ವಿ.ಕೆ.ಇಬ್ರಾಹಿಂ ಕುಂಞ ಅವರನ್ನು ಕೈಬಿಡಲಾಗಿದೆ. ಆದರೆ ಅವರ ಪುತ್ರ ವಿ.ಇ.ಅಬ್ದುಲ್ ಗಪೂರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂಲೀಗ್ 27 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅಭ್ಯರ್ಥಿಗಳನ್ನು ಘೋಷಿಸಿದರು. ಪಕ್ಷದ ಮೇಲೆ ನಿರೀಕ್ಷೆ ಇರಿಸಿದ್ದ , ಜನಮನ್ನಣೆ ಪಡೆದ ಎಲ್ಲಾ ಕಾರ್ಯಕರ್ತರಿಗೂ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗಿದೆ ಎಂದು ಅವರು ಹೇಳಿದರು.
ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಬ್ದುಲ್ ಸಮದ್ ಸಮದಾನಿ ಮತ್ತು ರಾಜ್ಯಸಭಾ ಸ್ಥಾನಕ್ಕೆ ಅಬ್ದುಲ್ ವಹಾಬ್ ಸ್ಪರ್ಧಿಸಲಿದ್ದಾರೆ. ಪುನಲೂರು, ಚಡಯಮಂಗಲಂ ಮತ್ತು ಪೆರಾಂಬ್ರಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಇನ್ನಷ್ಟೇ ಘೋಷಿಸಲಾಗುವುದು. 1996ರ ನಂತರ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಕಲ್ಲಕೋಟೆ ದಕ್ಷಿಣ ಕ್ಷೇತ್ರದಲ್ಲಿ ನೂರ್ಬಿನಾ ರಶೀದ್ ಕಣಕ್ಕೆ ಇಳಿಯಲಿದ್ದಾರೆ.
ಕುತೂಹಲ ಕೆರಳಿಸಿದ್ದ ಮಂಜೇಶ್ವರದಿಂದ ನಿರೀಕ್ಷೆಯಂತೆ ಬ್ಲಾಕ್ ಪಂಚಾಯತ್‌ನ ಮಾಜಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರನ್ನು ಕಣಕ್ಕಿಳಿಸಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ಎನ್.ಎ.ನೆಲ್ಲಿಕುನ್ನು ಅವರನ್ನೇ ಮೂರನೇ ಬಾರಿಗೆ ಸ್ಪರ್ಧೆಗಿಳಿಸಲು ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss