Wednesday, August 10, 2022

Latest Posts

ಪ್ಯಾಲೆಸ್ತೀನ್ ಉಗ್ರರ ದಾಳಿಗೆ ಕೇರಳ ದಾದಿ ಸೌಮ್ಯ ಸಂತೋಷ್ ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಉಗ್ರರು ಸೋಮವಾರ ರಾತ್ರಿ ನಡೆಸಿದ ರಾಕೇಟ್ ದಾಳಿಯಲ್ಲಿ ಕೇರಳದ ದಾದಿ ಸೌಮ್ಯ ಸಂತೋಷ್ (31) ಬಲಿಯಾಗಿರುವುದಾಗಿ ವರದಿಗಳು ತಿಳಿಸಿವೆ. ಅವರು ಕೇರಳದಲ್ಲಿರುವ ತನ್ನ ಪತಿ ಹಾಗೂ  9 ವರ್ಷ ಪ್ರಾಯದ ಮಗನನ್ನು ಅಗಲಿದ್ದಾರೆ.
ಇಡುಕ್ಕಿ ಮೂಲದ ಸೌಮ್ಯ ಸಂತೋಷ್ ಕಳೆದ 10 ವರ್ಷಗಳಿಂದ ಇಸ್ರೇಲ್‌ನಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಅವರು ವೃದ್ಧೆ ಮಹಿಳೆಯೊಬ್ಬರನ್ನು ಆರೈಕೆ ಮಾಡುತ್ತಿದ್ದ ಅಪಾರ್ಟ್‌ಮೆಂಟ್ ಒಂದರ ಮೇಲೆ ನಡೆದ ದಾಳಿಯಲ್ಲಿ ಅವರು ಬಲಿಯಾದರು. ಅವರು ತಮ್ಮ ಪತಿಯ ಜೊತೆ ರಾತ್ರಿ ದೂರವಾಣಿಯಲ್ಲಿ ಮಾತನಾಡುತ್ತಿರುವ ವೇಳೆ , ಪ್ಯಾಲೆಸ್ತೀನ್ ಉಗ್ರರು ನಡೆಸುತ್ತಿರುವ ರಾಕೇಟ್ ದಾಳಿ ಅಪಾರ್ಟ್ ಮೆಂಟ್‌ಗೆ ಅಪ್ಪಳಿಸುವ ಭೀತಿ ಇದೆ ಎಂದು ಹೇಳಿದ್ದರು. ಆದರೆ ಬಳಿಕ ಅವರು ಈ ದಾಳಿಗೆ ಬಲಿಯಾಗಿರುವುದು ಮೂಲಗಳಿಂದ ತಿಳಿದುಬಂತು ಎಂದು ವರದಿ ತಿಳಿಸಿದೆ.
ಸೌಮ್ಯಾ ಸಂತೋಷ್ ಅವರು ಉಗ್ರರ ದಾಳಿಗೆ ಬಲಿಯಾಗಿರುವುದನ್ನು ಕೇಂದ್ರ ಸಹಾಯಕ ವಿದೇಶಾಂಗ ಸಚಿವ ವಿ.ಮುರಳೀಧರನ್ ತೀವ್ರವಾಗಿ ಖಂಡಿಸಿದ್ದು, ಉಭಯ ಕಡೆಗಳು ಸಂಯಮ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದರು. ಸೌಮ್ಯ ಅವರ ಕುಟುಂಬವನ್ನು ಸಂಪರ್ಕಿಸಿದ ಸಚಿವರು ತಮ್ಮ ಗಾಢ ಸಂತಾಪವನ್ನು ವ್ಯಕ್ತಪಡಿಸಿ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆಯಿತ್ತು ಸಂತೈಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಇಸ್ರೇಲಿನ ಭಾರತೀಯ ರಾಯಭಾರಿ ರಾನ್ ಮಲ್ಕಾ ಅವರು ಕೂಡಾ ಉಗ್ರರ ದಾಳಿಗೆ ಅಮಾಯಕಿ ಸೌಮ್ಯಾ ಸಂತೋಷ್ ಅವರು ಬಲಿಯಾಗಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿ ಅವರ ಕುಟುಂಬದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಎಡರಂಗ ನಾಯಕರು ಕೇರಳದ ದಾದಿಯ ಸಾವಿನ ಬಗ್ಗೆ ಮೌನ ವಹಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss