ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳ ಹತ್ಯೆಗೆ ಸ್ಕೆಚ್: ಎನ್ಐಎ ತನಿಖೆಗೆ ಕೆ.ಜಿ.ಬೋಪಯ್ಯ ಒತ್ತಾಯ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗಿಗೆ ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳ ನರಮೇಧ ಮಾಡುವ ಆಡಿಯೋ ಸಂಭಾಷಣೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ, ಈ ಪ್ರಕರಣದ ಬಗ್ಗೆ ಎನ್ಐಎಯಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಕಾಲದಲ್ಲಿ ಜಿಲ್ಲೆಯ 50 ಕಡೆ ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳಿಗೆ ಭಯ ಹುಟ್ಟಿಸುವ ಯೋಜನೆ ಇದಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೀಗಾಗುತ್ತಿದೆ ಎಂದು ಸರಕಾರಕ್ಕೆ ಕಳಂಕ ತರಲು ಹಿಂಸಾಚಾರದ ಯೋಜನೆ ನಡೆದಿರುವಂತಿದೆ ಎಂದು ಹೇಳಿದರು.
ಸಂಭಾಷಣೆಯಲ್ಲಿ ಇದೆಲ್ಲವನ್ನೂ ಉಲ್ಲೇಖಿಸಿ ಮಾತನಾಡಿರುವುದು ಆತಂಕಕಾರಿಯಾಗಿದೆ. ಅಲ್ಲದೆ ಸಿದ್ದರಾಮಯ್ಯ- ಡಿಕೆಶಿ ಹೆಸರೂ ಉಲ್ಲೇಖಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಪಕ್ಷ ಯಾವುದೇ ಇದ್ದರೂ ಸಂಭಾಷಣೆ ನಡೆಸಿರುವವರು ಪಿಎಫ್ಐ ಜೊತೆಗೆ ಸಂಪರ್ಕ ಇರುವವರೇ ಆಗಿದ್ದಾರೆ ಎಂದು ಬೋಪಯ್ಯ ನುಡಿದರು.
ಅವರು ತರಬೇತಿಗೆ ಹೋಗಿದ್ದಾರೋ ಗೊತ್ತಿಲ್ಲ.ಆದರೆ ಈ ವಿಚಾರವಂತೂ ತುಂಬಾ ಗಂಭೀರವಾದುದು. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೂ ತಾನು ಮಾತುಕತೆ ನಡೆಸಿದ್ದು, ಪೊಲೀಸರು ಎನ್ಐಎಗೂ ಮಾಹಿತಿ ನೀಡಿದ್ದಾರೆ. ಎನ್ಐಎ ಯಿಂದಲೇ ಈ ಬಗ್ಗೆ ತನಿಖೆಯಾಗಬೇಕು ಎಂದರು.
ಸೋಮವಾರ ಕಾವೇರಿ ತೀರ್ಥೋದ್ಭವ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರುತ್ತಾರೆ. ಪೊಲೀಸರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಕಾವೇರಿ ತೀರ್ಥೋದ್ಭವಕ್ಕೂ ಇಂತಹವರಿಂದ ಕಂಟಕ ಇಲ್ಲದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಬೋಪಯ್ಯ, ಯಾವುದೇ ಸಮಸ್ಯೆಯಾಗದಂತೆ ಪೊಲೀಸರು ಗಮನ ನೀಡಬೇಕು ಎಂದರು.
ಸಂಭಾಷಣೆ ನಡೆಸಿರುವವರಲ್ಲಿ ಮಡಿಕೇರಿ ನಗರಸಭೆಯ ಜೆಡಿಎಸ್ ಸದಸ್ಯನೊಬ್ಬ ಇದ್ದು, ಮಡಿಕೇರಿ ನಗರದ ಜನರಿಂದಲೇ ಮತ ಪಡೆದು ಆಯ್ಕೆಯಾದ ವ್ಯಕ್ತಿ ಮಡಿಕೇರಿ ನಗರಕ್ಕೇ ಬಾಂಬ್ ಹಾಕಬೇಕೆಂದಿರುವುದು ಇವರ ವಿಕೃತ ಮನಸ್ಸು ಎಂತಹದ್ದೆಂಬುದನ್ನು ಬಹಿರಂಗಪಡಿಸಿದೆ.
ಇವರಿಗೆ ದೇಶಕ್ಕಿಂತ ಇಸ್ಲಾಂ ಹೆಸರಿನಲ್ಲಿ ಹಿಂದೂಗಳನ್ನು ನಾಶ ಮಾಡುವುದೇ ಮುಖ್ಯವಾಗಿದ್ದು, ಇವರ ಮೂಲ, ಇದರ ಹಿಂದೆ ಇರುವವರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದೂ ಅವರು ಆಗ್ರಹಿಸಿದರು.

ಆರೋಪಿಗಳಿಗೆ ಜಾಮೀನು: ಪೆಟ್ರೋಲ್ ಬಾಂಬ್ ಬಳಸಿ ಹಿಂದೂಗಳನ್ನು ಹತ್ಯೆ ನಡೆಸಬೇಕೆಂದು ಸಂಭಾಷಣೆ ನಡೆಸಿರುವ ಇಬ್ಬರು ಆರೋಪಿಗಳಿಗೆ ಇಲ್ಲಿನ ಜೆಎಂಎಫ್’ಸಿ ನ್ಯಾಯಾಲಯ ಷರತ್ತಿನ ಜಾಮೀನು ನೀಡಿದೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡುವುದೂ ಸೇರಿದಂತೆ ಹಲವು ಷರತ್ತುಗಳೊಂದಿಗೆ ಆರೋಪಿಗಳಾದ ಮುಸ್ತಾಫ ಹಾಗೂ ಅಬ್ದುಲ್ಲಾ ಅವರುಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!