ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಭಾರೀ ಕೋಲಾಹಲ ಸೃಷ್ಟಿಸಿದೆ.ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಹೋರಾಟ ನಡೆಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಇದಕ್ಕೆಸುದ್ದಿಗೋಷ್ಠಿ ನಡೆಸಿ ಉತ್ತರ ಕೊಟ್ಟ ಅಮಿತ್ ಶಾ , ಮಲ್ಲಿಕಾರ್ಜುನ ಖರ್ಗೆಗೆ ನನ್ನ ರಾಜೀನಾಮೆ ಬೇಕೆಂದರೆ ನಾನು ಕೊಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಖರ್ಗೆಯವರಿಗೆ ನನ್ನ ರಾಜೀನಾಮೆ ಬೇಕು ಎಂದರೆ ಕೊಡಲು ನಾನು ಸಿದ್ಧ. ಆದರೆ ನನ್ನ ರಾಜೀನಾಮೆಯಿಂದ ಕಾಂಗ್ರೆಸ್ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಾನು ರಾಜೀನಾಮೆ ನೀಡಿದರೂ ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ಕಾಂಗ್ರೆಸ್ ಪಕ್ಷದ ನಿಲವು ಬದಲಾಗಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಹಿಂದಿನಿಂದಲೂ ಹೇಳಿಕೆಗಳನ್ನು ತಿರುವುಚುವುದು ಅಂಕಿ ಅಂಶಗಳನ್ನು ಮರೆಮಾಚುವುದು ಮಾಡುತ್ತಿದೆ. ನಾನು ರಾಜ್ಯಸಭೆಯಲ್ಲಿ ಮಾತನಾಡಿರುವುದು ರೆಕಾರ್ಡ ಇದೆ. ಇದರ ಸಂಪೂರ್ಣ ಭಾಷಣವನ್ನು ಕೇಳಿಸಿಕೊಳ್ಳಿ. ಮಾಧ್ಯಮಗಳು ನನ್ನ ಸಂಪೂರ್ಣ ಭಾಷಣವನ್ನು ಜನರ ಮುಂದೆ ತಲುಪಿಸಿ. ಕತ್ತರಿ ಹಾಕಿ ಬೇರೊಂದು ಅರ್ಥದಲ್ಲಿ ತೋರಿಸಬೇಡಿ ಎಂದು ಅಮಿತ್ ಶಾ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಯಾವತ್ತೂ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ, ಮೀಸಲಾತಿ ವಿರೋಧಿಯಾಗಿದೆ. ಸಂವಿಧಾನವನ್ನು ತುರ್ತು ಪರಿಸ್ಥಿತಿಯಲ್ಲಿ ಬಡುಮೇಲು ಮಾಡಿರುವುದು ಎಲ್ಲರೂ ನೋಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಯಾವತ್ತೂ ಸುಳ್ಳುಗಳನ್ನೇ ಹೇಳಿ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತದೆ. ಇದೀಗ ಅಂಬೇಡ್ಕರ್ ಕುರಿತು ನನ್ನ ಹೇಳಿಕೆಯನ್ನು ತದ್ವಿರುದ್ಧವಾಗಿ ಪ್ರಚಾರ ಮಾಡುತ್ತಿದೆ. ಅಂಬೇಡ್ಕರ್‌ಗೆ ಅವಮಾನ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಇದೀಗ ಸುಳ್ಳು ಅಸ್ತ್ರವನ್ನು ಹಿಡಿದು ತಮ್ಮ ನಿಲುವು, ಮಾಡಿರುವ ಕೃತ್ಯಗಳನ್ನು ಮರೆ ಮಾಚಲು ಮುಂದಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.