ಟ್ರ್ಯಾಕ್ಟರ್- ಟ್ಯಾಂಕರ್‌ ನಡುವೆ ಭೀಕರ ರಸ್ತೆ ಅಪಘಾತ: 6 ಸಾವು, 14 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಬರೇಲಿ- ಆಗ್ರಾ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಒಂದು ಟ್ಯಾಂಕರ್‌ಗೆ ಡಿಕ್ಕಿಯಾಗಿ ಅದರ ಟ್ರಾಲಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಮೂಸಜಾಗ್ ಪ್ರದೇಶದ ಔರಮೈ ಗ್ರಾಮದ ಕೆಲವು ಕುಟುಂಬಗಳು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಅಲ್ಲಿಂದ ಹಿಂದಿರುಗುತ್ತಿದ್ದಾಗ, ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ಯಾಂಕರ್ ವಾಹನವನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಒಪಿ ಸಿಂಗ್ ತಿಳಿಸಿದ್ದಾರೆ.
ಡಿಕ್ಕಿ ಬಳಿಕ ಬ್ಯಾಲೆನ್ಸ್ ಕಳೆದುಕೊಂಡ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದ್ದು, ಐವರು ಮಹಿಳೆಯರು ಮತ್ತು ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಮೃತರನ್ನು ಅನಿತಾ ದೇವಿ (40), ಸಂಗೀತಾ (19), ಸುಷ್ಮಾ (65), ವೀರಾ ದೇವಿ (75), ಪೂನಂ (28), ಮತ್ತು ಸಹದೇವ್ (12) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ಬದೌನ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಘಟನೆಯ ನಂತರ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!