ಹೊಸ ದಿಗಂತ ವರದಿ, ಶಿವಮೊಗ್ಗ :
ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ನಗರದಲ್ಲಿ ಮಾ.20 ರಂದು ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿರುವ ರೈತರ ಮಹಾ ಪಂಚಾಯತ್ಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸೇರಲಿದ್ದಾರೆ ಎಂದು ರೈತ ಮುಖಂಡ
ಕೆ.ಟಿ. ಗಂಗಾಧರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು, ಕೊಡಗು, ಉಡುಪಿ ಜಿಲ್ಲೆಗಳಿಂದಲೂ ರೈತರು ಮಹಾಪಂಚಾಯತ್ಗೆ ಆಗಮಿಸಲಿದ್ದಾರೆ. ಕೇಂದ್ರ ವಿರುದ್ಧ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಅತೀ ದೊಡ್ಡ ರೈತಪಂಚಾಯತ್ ಇದಾಗಿದೆ ಎಂದರು.
ಮಾರ್ಚ್ 20 ರಂದು ಸಂಜೆ 4 ಗಂಟೆಗೆ ನಗರದ ಸೈನ್ಸ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ರಾಕೇಶ್ ಠಿಕಾಯತ್, ಯದುವೀರ ಸಿಂಗ್, ಡಾ. ಕಶ್ಯಪ್, ಜಗಮೋಹನ್ ಸಿಂಗ್ ಇದರಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಭೂಮಿ, ಅಹಾರ ಹಾಗೂ ಆಹಾರ ವಸ್ತು ದಾಸ್ತಾನನ್ನು ಕೇಂದ್ರ ಸರ್ಕಾರ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ರೈತ ಹೋರಾಟಕ್ಕೆ ಬಿಜೆಪಿಯ ಕೆಲ ನಾಯಕರೇ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಬಹಿರಂಗ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ರೈತರ ಮಹಾ ಪಂಚಾಯತ್ ಲೋಗೋವನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಬಿಡುಗಡೆ ಮಾಡಿದರು.