- ಮೇಘನಾ ಶೆಟ್ಟಿ, ಶಿವಮೊಗ್ಗ
ಕೊರೋನಾ ಇಲ್ಲದಿದ್ದರೆ ಯಾವ ಭಾನುವಾರ ತಾನೆ ಮನೆಯಲ್ಲೇ ಕುಳಿತಿರುತ್ತಿದ್ದೆವು? ತಿನ್ನೋಕೆ ಹೋಗೋದು, ಕನಿಷ್ಠ ಮನೆ ಹತ್ತಿರವೇ ಇರುವ ಯಾವುದಾದರೂ ಮ್ಯೂಸಿಯಂಗಾದರೂ ಹೋಗಿ ಬರ್ತಿದ್ವಿ. ಅದರಲ್ಲೂ ಸೈನ್ಸ್ ಮ್ಯೂಸಿಯಂ, ಆಂಟಿಕ್ ಮ್ಯೂಸಿಯಂ ಹೀಗೆ.. ಆದರೆ ನೀವೆಂದಾದರೂ ‘ಟಾಯ್ಲೆಟ್ ಮ್ಯೂಸಿಯಂ’ಗೆ ಹೋಗಿದ್ದೀರಾ? ‘ಥೂ ಅಸಹ್ಯ ಈಗ ತಾನೆ ಊಟ ಮಾಡಿ ಕುಳಿತಿದ್ದೀವಿ, ಇದೇನಿದು ಗಲೀಜು ಮಾತಾಡ್ತಿರಿ’ ಅನ್ಕೊಂಡ್ರಾ? ನಿಜವಾಗಿಯೂ ‘ಟಾಯ್ಲೆಟ್ ಮ್ಯೂಸಿಯಂ’ ಇದೆ. ಬೇರೆ ಎಲ್ಲೋ ಅಲ್ಲ, ನಮ್ಮ ದೇಶದಲ್ಲೇ ಇದೆ..
ಈ ‘ಟಾಯ್ಲೆಟ್ ಮ್ಯೂಸಿಯಂ’ ಇರುವುದು ದೆಹಲಿಯ ಪಣಮ್ನಲ್ಲಿ. 1992 ರಲ್ಲಿ ಡಾ. ಬಿಂದೇಶ್ವರ್ ಪಾಠಕ್ ವಿಶ್ವದ ಮೊದಲ ಟಾಯ್ಲೆಟ್ ಮ್ಯೂಸಿಯಂ ಸ್ಥಾಪಿಸುತ್ತಾರೆ. ಟಾಯ್ಲೆಟ್ ಕುರಿತಾದ ಭಿನ್ನ ವಿಭಿನ್ನ ಕಥೆಗಳನ್ನು ನೀವಿಲ್ಲಿ ಕಾಣಬಹುದು. ಹಾಗೆ ಸುಮ್ಮನೆ ಇಮ್ಯಾಜಿನ್ ಮಾಡಿ ಈ ಮ್ಯೂಸಿಯಂನಲ್ಲಿ ಏನೇನಿರಬಹುದು?
ವಾಕರಿಕೆ ಬರುವಂಥದ್ದು ಏನೂ ಇಲ್ಲ.. ಇಂಟ್ರೆಸ್ಟಿಂಗ್ ಅನಿಸುವಂಥ ಮಾಹಿತಿ ಈ ಮ್ಯೂಸಿಯಂನಲ್ಲಿ ಇದೆ.
ಮ್ಯೂಸಿಯಂನಲ್ಲಿ ಏನೇನಿದೆ?
ಈ ಪ್ರಶ್ನೆಯನ್ನು ಹಲವರಿಗೆ ಕೇಳಿದಾಗ ಮ್ಯೂಸಿಯಂ ಒಳಗೆ ಮಾಸ್ಕ್ ಇಲ್ಲದೆ ಬರೋಕಾಗಲ್ಲ, ಕೆಟ್ಟ ವಾಸನೆ ಇರಬಹುದು. ನೋಡೋ ಅಂಥದ್ದೇನಿಲ್ಲ ಕರ್ಮ ಎಂದೆಲ್ಲಾ ಜನ ಹೇಳಿದರು. ಆದರೆ ಅಲ್ಲಿ ಇರುವುದೇ ಬೇರೆ, ಜಗತ್ತಿನ ಎಷ್ಟೋ ಟಾಯ್ಲೆಟ್ಗಳ ಉಗಮ, ಅದರ ಕಥೆಗಳು ಇಲ್ಲಿವೆ.
ಸುಲಭ್ ಶೌಚಾಲಯ
ಸುಲಭ ಶೌಚಾಲಯದ ಹೆಸರು ಕೇಳಿದ್ದೀರಾ? ಈ ಶೌಚಾಲಯಗಳನ್ನು ಸುಲಭ್ ಇಂಟರ್ನ್ಯಾಷನಲ್ ಹೆಸರಿನ ಎನ್ಜಿಒ ನಡೆಸಿಕೊಡುತ್ತದೆ. ಈ ಮ್ಯೂಸಿಯಂ ಕೂಡ ಅದೇ ರೀತಿ ಇದರ ಹೆಸರು ಸುಲಭ್ ಇಂಟರ್ನ್ಯಾಷನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್.
ಸಾವಿರಾರು ವರ್ಷದ ಟಾಯ್ಲೆಟ್
ಈ ಮ್ಯೂಸಿಯಂನಲ್ಲಿ ಹಳೆಯ ಕಾಲದ ಅಂದರೆ ಐದು ಸಾವಿರ ವರ್ಷದ ಹಿಂದಿನ ಟಾಯ್ಲೆಟ್ಗಳ ಮಾಹಿತಿ ಇದೆ.
2500ಬಿಸಿಯಿಂದ ಇಲ್ಲಿಯವರೆಗೆ ಯಾವ ರೀತಿ ಟಾಯ್ಲೆಟ್ಗಳ ಎವಲ್ಯೂಶನ್ ಆಯಿತು ಎನ್ನುವ ಮಾಹಿತಿ ಕೂಡ ಇಲ್ಲಿ ಸಿಗಲಿದೆ. ಇಂಡಸ್ ವ್ಯಾಲಿ ಸಿವಿಲೈಸೇಶನ್ ಸಮಯದಲ್ಲಿ ಡ್ರೈನೇಜ್ ಸಿಸ್ಟಮ್ ಹೇಗಿತ್ತು ಎನ್ನುವುದರ ಬಗ್ಗೆ ತಿಳಿಯಬೇಕಾದರೆ ಈ ಮ್ಯೂಸಿಯಂಗೆ ಭೇಟಿ ನೀಡಿ. ಓದಿ ತಿಳಿದಷ್ಟು ವಿಷಯ ಮಾತ್ರ ನಮಗೆ ತಿಳಿದಿದೆ. ಈ ಮ್ಯೂಸಿಯಂನಿಂದ ಹೊರಡುವಾಗ ಖಂಡಿತಾ ಈ ಹಿಂದೆ ತಿಳಿದಿಲ್ಲದ ವಿಷಯ ತಿಳಿದುಕೊಂಡೇ ಹೊರಡುತ್ತೀರಿ.
ಐಡಿಯಾ ಹೊಳೆದದ್ದು…
ಮ್ಯೂಸಿಯಂನನ್ನು ನೋಡಿಕೊಳ್ಳುವ ಭಾಗೇಶ್ವರ್ ಝಾ ಅವರು ಈ ಮ್ಯೂಸಿಯಂ ಕಾನ್ಸೆಪ್ಟ್ ಹುಟ್ಟಿದರ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಬಿಂದೇಶ್ವರ್ ಪಾಠಕ್ ಅವರು ಮ್ಯಾಡಮ್ ತುಸ್ಸೌಡ್ಸ್ರನ್ನು ಭೇಟಿ ಮಾಡಲು ಲಂಡನ್ಗೆ ತೆರಳಿದ್ದರು.1952 ರಲ್ಲಿ ಅಲ್ಲಿಂದ ಭಾರತಕ್ಕೆ ಬಂದಾಗ ಅವರು ಟಾಯ್ಲೆಟ್ ಮ್ಯೂಸಿಯಂ ಐಡಿಯಾ ಹೊತ್ತು ತಂದಿದ್ದರು. ದೆಹಲಿಯ ಎಲ್ಲ ಎಂಬೆಸ್ಸಿಗಳಿಗೂ ಪತ್ರ ಬರೆದರು. ‘ನಾನು ಇಂಟರ್ನ್ಯಾಶನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ ಸ್ಥಾಪಿಸುತ್ತಿದ್ದೇನೆ. ನಿಮ್ಮ ದೇಶದ ಟಾಯ್ಲೆಟ್ಗಳು, ಅದರ ಉಗಮದ ಬಗ್ಗೆ ಮಾಹಿತಿ ಕೊಡಿ’ ಎಂದು ಕೇಳಿಕೊಂಡರು.
ಎಂಟ್ರಿ ಫೀಸೇ ಇಲ್ಲ..
ಟೈಮ್ಸ್ ಮ್ಯಾಗಜೀನ್ ಸರ್ವೆ ಅನ್ವಯ ವಿಚಿತ್ರವಾದ ಮ್ಯೂಸಿಯಂಗಳಲ್ಲಿ ಟಾಯ್ಲೆಟ್ ಮ್ಯೂಸಿಯಂಗೆ ಮೂರನೇ ಸ್ಥಾನ. ಟಾಯ್ಲೆಟ್ ಮ್ಯೂಸಿಯಂನಲ್ಲಿ ನೋಡೋದೇನಿದೆ, ಇಲ್ಲಿಗೆ ನಿಜಕ್ಕೂ ಜನ ಬರುತ್ತಾರಾ? ಖಂಡಿತಾ ಹೌದು ವರ್ಷಕ್ಕೆ ಏನಿಲ್ಲಾ ಎಂದರೂ 10 ಸಾವಿರಕ್ಕೂ ಹೆಚ್ಚು ಮಂದಿ ಈ ಮ್ಯೂಸಿಯಂ ವಿಸಿಟ್ ಮಾಡುತ್ತಾರೆ.
ಬೇರೆ ಮ್ಯೂಸಿಯಂಗಳಲ್ಲಿ ಇರುವ ಹಾಗೆ ಇಲ್ಲಿ ಎಂಟ್ರಿ ಫೀ, ಕಾರ್ ಪಾರ್ಕಿಂಗ್ ಫೀ,ಗೈಡ್ ಚಾರ್ಜಸ್ ಯಾವುದೂ ಇಲ್ಲ. ಬ್ಯುಸಿನೆಸ್ಗಾಗಿ ಮಾಡಿದ ಮ್ಯೂಸಿಯಂ ಇದಲ್ಲ.
ಟಾಯ್ಲೆಟ್ ಇರಲೇಬೇಕು
ಪ್ರತಿ ಮನೆಯಲ್ಲೂ, ಪ್ರತಿ ಹಳ್ಳಿಯಲ್ಲೂ ಟಾಯ್ಲೆಟ್ ಇರಲೇಬೇಕು. ಮ್ಯೂಸಿಯಂನಲ್ಲಿ ನಾವು ಟಾಯ್ಲೆಟ್ಗೆ ಕೊಡುವ ಮಾನ್ಯತೆ ಕಂಡು ಜನರಿಗೆ ಟಾಯ್ಲೆಟ್ ಎಂದರೆ ಕೀಳಲ್ಲ. ಅದಕ್ಕೂ ಅದರದ್ದೇ ಆದ ಮಹತ್ವ ಇದೆ ಎಂದು ಅರಿವಾಗಬೇಕು ಎನ್ನುತ್ತಾರೆ ಭಾಗೇಶ್ವರ್
ಟಾಯ್ಲೆಟ್ ಟೈಮ್ವೇಸ್ಟ್
ಈ ಮ್ಯೂಸಿಯಂನಲ್ಲಿ ಇನ್ನೊಂದು ವಿಶೇಷ ಇದೆ. ಫ್ರೆಂಚ್ ದೊರೆ ಲೂಯಿಸ್ 16 ಬಳಸುತ್ತಿದ್ದ ಟಾಯ್ಲೆಟ್ ಚೇರ್ನ ರೆಪ್ಲಿಕಾ ಇಲ್ಲಿಯೂ ಇದೆ. ಲೂಯಿಸ್ ಇದನ್ನು ಟಾಯ್ಲೆಟ್ ರೀತಿ ಅಲ್ಲದೇ ತನ್ನ ಸಿಂಹಾಸನದ ರೀತಿ ಬಳಸುತ್ತಿದ್ದ. ಟೈಮ್ ಸೇವ್ ಮಾಡಲು ಆತ ಕಂಡುಹಿಡಿದ ದಾರಿಯಿದು.
ಕೂತರೆ ಕರೆಂಟ್ ಹೊಡೆಯೋದಿಲ್ಲ
ಯುಎಸ್ ನೇವಿ ಬಳಸುತ್ತಿದ್ದ ಎಲೆಕ್ಟ್ರಿಕ್ ಟಾಯ್ಲೆಟ್ ಕೂಡ ಇಲ್ಲಿದೆ. ಇಲ್ಲಿ ಟಾಯ್ಲೆಟ್ ಮಾಡಿದ ನಿಮಿಷದೊಳಗೆ ವೇಸ್ಟ್ ಎಲ್ಲವೂ ಬೂದಿಯಾಗುತ್ತದೆ. ಹಾಗಂತ ಕೂರೋಕೆ ಹೆದರಬೇಕಾಗಿಲ್ಲ. ಕೂತರೆ ಕರೆಂಟ್ ಹೊಡೆಯೋದಿಲ್ಲ.
ಟಾಯ್ಲೆಟ್ ಮ್ಯೂಸಿಯಂ ಅನ್ನೋ ಹೆಸರು ಕೇಳಿದ ತಕ್ಷಣ, ಇದನ್ಯಾಕೆ ಓದೋದು ಅನ್ನೋ ಭಾವನೆ ಬಂದು ಹೋಗುತ್ತದೆ. ಆದರೆ ಇದರಲ್ಲೂ ತಿಳಿದುಕೊಳ್ಳೋ ವಿಚಾರಗಳು ಸಾಕಷ್ಟಿತ್ತು ಅಲ್ವಾ?