Wednesday, August 10, 2022

Latest Posts

ಕೊಡಗು| 4,500 ಕೋಟಿ ರೂ. ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಹೊಸ ದಿಗಂತ ವರದಿ ಕೊಡಗು:

ಜಿಲ್ಲಾ ಅಗ್ರಣ (ಲೀಡ್) ಬ್ಯಾಂಕ್‌ನ 2021-22 ನೇ ಸಾಲಿಗೆ 4,500 ಕೋಟಿ ರೂ. ಗುರಿಯ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಬುಧವಾರ ಬಿಡುಗಡೆ ಮಾಡಿದರು.

ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷ ಸಮನ್ವಯ ಸಮಿತಿ ಸಭೆಯಲ್ಲಿ ಸಾಲ ಯೋಜನೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಕೃಷಿಕರಿಗೆ ಸಾಲ ವಿತರಿಸುವ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುವಂತೆ ಸಲಹೆ ಮಾಡಿದರು.

ಕೃಷಿಕರು ಉತ್ಪಾದಿಸಿದ ಉತ್ಪನ್ನದಿಂದ ರೈತರಿಗೆ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಬೇಕಿದೆ ಎಂದರು.

ಭಾರತೀಯ ಯೂನಿಯನ್ ಬ್ಯಾಂಕ್ ಮೈಸೂರು ವಲಯ ಸಹಾಯಕ ಮಹಾ ಪ್ರಬಂಧಕ ರವಿಚಂದರ್ ಅವರು ಮಾತನಾಡಿ, 2021-22ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆಯಡಿ 4,500 ಕೋಟಿ ರೂ. ಗುರಿ ನಿಗದಿಪಡಿಸಲಾಗಿದ್ದು, ಅದರಲ್ಲಿ 87 ಪ್ರತಿಶತ ಅಂದರೆ 3,900 ಕೋಟಿ ರೂ. ಆದ್ಯತಾ ವಲಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ಕೃಷಿ ಚಟುವಟಿಕೆಗೆ 2,600 ಕೋಟಿ ರೂ., ಕಿರು ಮತ್ತು ಮಧ್ಯಮ ಕ್ಷೇತ್ರಕ್ಕೆ 700 ಕೋಟಿ ರೂ. ಹಾಗೂ ಇತರೆ ಆದ್ಯತಾ ವಲಯಕ್ಕೆ 600 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯ ಪ್ರಗತಿ ಸಾಧಿಸಬೇಕು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಲೀಡ್ ಬ್ಯಾಂಕ್ ಮುಖ್ಯಸ್ಥ ಆರ್.ಕೆ.ಬಾಲಚಂದ್ರ ಅವರು ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಈ ಕ್ರಿಯಾ ಯೋಜನೆಯನ್ನು ನಬಾರ್ಡ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ನೆರವನ್ನು ಪಡೆದು ಬ್ಯಾಂಕ್‌ಗಳ ವಲಯವಾರು ಹಂಚಿಕೆಗೆ ಅನುಸಾರವಾಗಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಹಾಗೆಯೇ ಹಿಂದಿನ ವರ್ಷದ ಆಯಾಯ ಬ್ಯಾಂಕ್‌ಗಳ ಸಾಧನೆ ಗಮನಿಸಿ ವಾರ್ಷಿಕ ಸಾಲ ಯೋಜನೆ ಗುರಿ ಸಿದ್ಧಪಡಿಸಲಾಗಿದ್ದ, ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಕೃಷಿ ಮತ್ತು ಆದ್ಯತಾ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಸಭೆಯಲ್ಲಿ ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಮಚಂದ್ರ ನಾಯಕ್, ಕೆನರಾ ಬ್ಯಾಂಕಿನ ಪ್ರಬಂಧಕ ಜಿ.ಸಿ.ಪ್ರಕಾಶ್, ಎಸ್‌ಬಿಐ ನ ಮುಖ್ಯ ಪ್ರಬಂಧಕ ದಿನೇಶ್ ಪೈ, ಕಾವೇರಿ ಗ್ರಾಮೀಣ ಬ್ಯಾಂಕಿನ ವಲಯ ಪ್ರಬಂಧಕ ಅಶೋಕ, ನಬಾರ್ಡ್ ಅಧಿಕಾರಿ ಶ್ರೀನಿವಾಸ್ ಇತರರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss