Friday, March 5, 2021

Latest Posts

ಅಕಾಲಿಕ ಮುಸಲಧಾರೆಗೆ ಅಕ್ಷರಶಃ ತತ್ತರಿಸಿದ ಕಾಫಿ ನಾಡು

ದಿಗಂತ ವರದಿ ಮಡಿಕೇರಿ:

ಈಗಾಗಲೇ ಕೊರೋನಾ ಸಂಕಷ್ಟದಿಂದ ಕಂಗಾಲಾಗಿರುವ ಕೊಡಗು ಭಾಗದ ಕೃಷಿಕರಿಗೆ ಶುಕ್ರವಾರ ದಿಢೀರನೆ ಸುರಿದ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಸುತ್ತ ಮುತ್ತಲ್ಲ ಭಾಗದಲ್ಲಿ ದಿಢೀರನೆ ಕಾಣಿಸಿಕೊಂಡ ಗುಡುಗು ಸಹಿತ ಜೋರಾಗಿ ಸುರಿದ ಆಲಿಕಲ್ಲು ಮಳೆಯಿಂದ ಕಾಫಿ ಕಣದಲ್ಲಿ ಕಾಫಿಯನ್ನು ಕೊಯ್ಲು ಪೂರ್ಣಗೊಳಿಸಿ ಒಣಗಿಸಲು ಇಟ್ಟ ಕಾಫಿ ಸಂಪೂರ್ಣ ನಷ್ಟಗೊಂಡಿದೆ.
ಕರಿಮೆಣಸಿಗೆ ಮಾತ್ರ ಆಶಾದಾಯಕ
ಕೆಲವು ಬೆಳೆಗಾರರು ಮಳೆ ಬರುವ ಮುನ್ಸೂಚನೆ ಇದುದ್ದರಿಂದ ಗೋದಾಮಿನಲ್ಲಿ ಶೇಖರಿಸಿಟ್ಟಿದರಿಂದ ಯಾವುದೇ ತೊಂದರೆಗೆ ಒಳಗಾಗದೆ  ಪಾರಾದರು. ವಾಣಿಜ್ಯ ಬೆಳೆಯಾದ ಕರಿಮೆಣಸಿಗೆ ಈ ಮಳೆ ಮಾತ್ರ ಒಂದಿಷ್ಟು ಆಶಾದಾಯಕವಾಗಿದೆ.
ಮಳೆಗೆ ತತ್ತರಿಸಿತು ಸೋಮವಾರಪೇಟೆ
ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿ ಬೆಳೆಗಾರರು ಆತಂಕ ಗೊಂಡಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ಅರ್ಧ ಇಂಚಿನಷ್ಟು ಮಳೆ ಬಿದ್ದು, ಸಂಜೆಯೂ ಗುಡುಗು ಸಹಿತ ಮಳೆ ಕಾಣಿಸಿಕೊಂಡಿತ್ತು. ಸಂಜೆ ಕೂಡ ಪಟ್ಟಣದ ಸುತ್ತಮುತ್ತಲ ಬಹುತೇಕ ಗ್ರಾಮಗಳಲ್ಲಿ ಗುಡುಗು ಸಹಿತ ಮಳೆ ಸುರಿದಿತ್ತು. ಇದಲ್ಲದೆ  ಕರ್ಕಳ್ಳಿ, ಚೌಡ್ಲು, ಮಸಗೋಡು, ಕುಸೂಬೂರು, ಕಾರೇಕೊಪ್ಪ, ತಣ್ಣೀರುಹಳ್ಳ, ಹಾರಳ್ಳಿ ಗ್ರಾಮಗಳಲ್ಲೂ ಮಳೆ ಸುರಿದಿದೆ. ಅಲ್ಲಲ್ಲಿ ಅರ್ಧ ಇಂಚಿನಷ್ಟು ಮಳೆ ಬಿದ್ದಿರುವ ಪರಿಣಾಮ ಅರೇಬಿಕಾ ಕಾಫಿ ತೋಟಗಳಲ್ಲಿ ಅಲ್ಪಸ್ವಲ್ಪ ಹೂ ಅರಳಿ ಹಾಳಾಗುವ ಆತಂಕ ಎದುರಾಗಿದೆ.
ಶ್ರಮಪಟ್ಟು ಬೆಳೆ ಬೆಳೆದ ಕೃಷಿಕರ ನಿದ್ದೆಗೆಡಿಸಿದೆ ಈ ಅಕಾಲಿಕ ಮಳೆ
ಮಾರ್ಚ್ ಎರಡನೇ ವಾರದಲ್ಲಿ ಒಂದೆರಡು ಇಂಚಿನಷ್ಟು ಮಳೆ ಸುರಿದ ನಂತರ ಕಾಫಿ ಹೂ ಅರಳಿದರೆ, ಫಸಲುಗಟ್ಟಿ ಉತ್ತಮ ಫಸಲಿನ ನಿರೀಕ್ಷೆಯಿತ್ತು. ಆದರೆ ಪ್ರಸಕ್ತ ವರ್ಷವು ಅಕಾಲಿಕ ಮಳೆ ಈ ಭಾಗದ ಬೆಳೆಗಾರರ ನಿದ್ದೆಗೆಡಿಸಿದೆ. ಇನ್ನು ಮಳೆ ಮುಂದುವರಿದರೆ ಬ್ಲಾಸಂ ಆಗಲಿದೆ. ಒಟ್ಟಿನಲ್ಲಿ ಅಕಾಲಿಕ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಮಾತ್ರ ಪ್ರತಿವರ್ಷ ಕಾಫಿ ಫಸಲು ಹಾನಿಯಾಗುತ್ತಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss