Wednesday, February 28, 2024

ಕೊಡಗು: ಮನೋರಂಜನೆಗಾಗಿ ನೃತ್ಯ, ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ: ರಮೇಶ್ ಮುದ್ದಯ್ಯ

ಹೊಸದಿಗಂತ ವರದಿ, ಮಡಿಕೇರಿ:
ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡಿದ್ದು ಮನೋರಂಜನೆಯ ದೃಷ್ಟಿಯಿಂದ ಹೊರತು ಯಾರದೇ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶದಿಂದಲ್ಲ ಎಂದು ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಸ್ಪಷ್ಟಪಡಿಸಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವ ಎರಡು ದಿನಗಳ ಕಾಲ ನಡೆದಿದ್ದು, ಆರಂಭಿಕ ದಿನದಂದು ಬೆಳಗ್ಗಿನ ಸಮಾರಂಭದಲ್ಲಿ ಎಂಎಲ್‌ಸಿ ವೀಣಾ ಅಚ್ಚಯ್ಯ ಹಾಜರಿದ್ದರು.ಆದರೆ ಅಪರಾಹ್ನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಹಾಜರಿರಲಿಲ್ಲ. ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಇದರ ಭಾಗವಾಗಿ ಕೆಲ ಮಕ್ಕಳು ಛದ್ಮವೇಷದ ಸಲುವಾಗಿ ಮುಖ ಕಾಣಬಾರದೆನ್ನುವ ಉದ್ದೇಶದಿಂದ ಬುರ್ಖಾ ಮತ್ತು ಹಿಜಾಬ್ ಧರಿಸಿ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ್ದಾರೆ. ಇದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಿಜಾಬ್, ಬುರ್ಖಾ ಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿರುವುದಾಗಿ ಮತ್ತು ಈ ಸಂದರ್ಭ ವೀಣಾ ಅಚ್ಚಯ್ಯ ಹಾಜರಿದ್ದರೆಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.
ನಾಲ್ಕುನಾಡು ವ್ಯಾಪ್ತಿಯಲ್ಲಿ ನಾವು ಮುಸ್ಲಿಂ ಸಮುದಾಯದವರೊಂದಿಗೆ ಪರಸ್ಪರ ಅನ್ಯೋನ್ಯವಾಗಿದ್ದು, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಯುವಕರು ಕೊಡವ ಉಡುಪು ಧರಿಸಿ ನೃತ್ಯ ಮಾಡಿದ ಉದಾಹರಣೆಗಳಿವೆ. ಆದರೆ ನಾವುಗಳು ಎಂದೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಅದೇ ರೀತಿ ಗ್ರಾಮಾಭಿವೃದ್ಧಿ ಸಂಘದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಕೆಲವರು ಬುರ್ಕಾ ಧರಿಸಿ ನೃತ್ಯ ಮಾಡಿದ್ದು, ಆ ಮೂಲಕ ಮುಸ್ಲಿಂ ಬಾಂಧವರಿಗೆ ಅವಮಾನ, ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಆದರೂ ಮಕ್ಕಳ ಕಾರ್ಯಕ್ರಮದಿಂದ ಯಾರದೇ ಭಾವನೆಗಳಿಗೆ ನೋವುಂಟಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕುಂಡ್ಯೋಳಂಡ ವಿಶು ಪೂವಯ್ಯ, ಸದಸ್ಯರಾದ ಕನ್ನಂಬಿರ ಸುಧಿ ತಿಮ್ಮಯ್ಯ, ಕಾಂಡಂಡ ಸೂರಜ್ ಬೋಪಣ್ಣ , ಕಾಂಡಂಡ ಅಪ್ಪಚ್ಚ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!