Wednesday, August 10, 2022

Latest Posts

ಆಲಿಕಲ್ಲು ಬಿದ್ದು ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಕೊಡಗು ಜಿಲ್ಲಾಧಿಕಾರಿ

ಹೊಸ ದಿಗಂತ ವರದಿ, ಶನಿವಾರಸಂತೆ:

ಇತ್ತೀಚೆಗೆ ಆಲಿಕಲ್ಲು ಸಹಿತ ಅಕಾಲಿಕ ಮಳೆಯಾಗಿ ಹಾನಿಗೊಳಗಾದ ಉತ್ತರ ಕೊಡಗಿನ ಆಲೂರುಸಿದ್ದಾಪುರ ಗ್ರಾ.ಪಂ.ಗೆ ಸೇರಿದ ಅಂಕನಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗಳನ್ನು ಪರಿಶೀಲಿಸಿದರು.
ಆಲೂಸಿದ್ದಾಪುರ ಗ್ರಾ.ಪಂ.ಯ ಅಂಕನಹಳ್ಳಿ, ಮೆಣಸ, ಕೈಸರಳ್ಳಿ, ಸೀಗೆಮರೂರು, ಹಂಬಳ್ಳಿ, ಮನೆಹಳ್ಳಿ, ಬೆಟ್ಟದಹಳ್ಳಿ, ಮೈಲಾದಪುರ, ನಾಗವಾರ ಮುಂತಾದ 11 ಗ್ರಾಮಗಳ ವ್ಯಾಪ್ತಿಯಲ್ಲಿ ಫೆ.18ರಂದು ಭಾರೀ ಆಲಿಕಲ್ಲು ಮಳೆಯಾಗಿತ್ತು ಇದರಿಂದ ಈ ವ್ಯಾಪ್ತಿಯ ಸುಮಾರು 2 ಸಾವಿರದ 400 ಎಕರೆ ಪ್ರದೇಶದಲ್ಲಿ ಕಾಫಿ, ಕಾಳು ಮೆಣಸು, ಬಾಳೆ, ಅಡಿಕೆ, ಸೇರಿದಂತೆ ಹೊಲಗಳಲ್ಲಿ ಬೆಳೆದಿದ್ದ ಜೋಳ, ಹಸಿರು ಮೆಣಸು, ಸಿಹಿ ಗೆಣಸು, ಮರ ಗೆಣಸು ಮುಂತಾದ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿತ್ತು.
ಈ ಸಂಬಂಧ ಉಪ ವಿಭಾಗಾಧಿಕಾರಿ, ಸೋಮವಾರಪೇಟೆ ತಹಶೀಲ್ದಾರರು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಪ್ರಾಥಮಿಕ ಸಮೀಕ್ಷೆ ನಡೆಸುವುದರೊಂದಿಗೆ ಆಲಿಕಲ್ಲು ಮಳೆಗೆ ಶೇ.100ರಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಸರಕಾರಕ್ಕೆ ವರದಿ ನೀಡಿದ್ದರು.
ಮಂಗಳವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಹಾನಿಗೊಳಗಾದ 11 ಗ್ರಾಮಗಳಿಗೆ ಭೇಟಿ ನೀಡಿ ಮಳೆಗೆ ಹಾನಿಗೊಳಗಾದ ಜೋಳ, ಹಸಿರು ಮೆಣಸು, ಶುಂಠಿ, ಸಿಹಿ ಗೆಣಸು, ಮರಗೆಣಸು ತೋಟದ ಬೆಳೆಗಳಾದ ಕಾಫಿ ಕಾಳು ಮೆಣಸು, ಬಾಳೆ, ಅಡಿಕೆ ಬೆಳೆಯನ್ನು ವೀಕ್ಷಣೆ ಮಾಡಿದರು. ರೈತರು ಬೆಳೆದ ಬೆಳೆಗಳ ಬಗ್ಗೆ ರೈತರಿಂದ ಮಾಹಿತಿಯನ್ನು ಪಡೆದುಕೊಂಡರು. ಇದೇ ಸಂದರ್ಭ ಅವರು ತೋಟಗಾರಿಕೆ, ಕೃಷಿ, ಕಂದಾಯ ಮತ್ತು ಕಾಫಿ ಮಂಡಳಿ ಅಧಿಕಾರಿಗಳಿಂದಲೂ ವಿವರಣೆ ಪಡೆದುಕೊಂಡರು.
ಈ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದಾಗಿ ಪ್ರತಿಯೊಂದು ಕೃಷಿ ಬೆಳೆಗಳೂ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತೋಟಗಾರಿಕೆ ಇಲಾಖೆ ಸೋಮವಾರಪೇಟೆ ತಾಲೂಕು ಅಧಿಕಾರಿ ಶೋಭಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಡಿಮೆ ಮಳೆ ಬೀಳುತ್ತದೆ. ರೈತರು ಕೊಳವೆ ಬಾವಿ ಮೂಲಕ ಕೃಷಿ ಮಾಡುತ್ತಾರೆ. ಈಗ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾಗಿದೆ ಎಂದು ತಹಶೀಲ್ದಾರ್ ಗೋವಿಂದ್‍ರಾಜು ವಿವರಿಸಿಸದರು.
ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರಕಾರಕ್ಕೆ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಈ ಸಂದರ್ಭ ಶನಿವಾರಸಂತೆ ಉಪ ತಹಶೀಲ್ದಾರ್ ಮಧುಸೂಧನ್, ಕಂದಾಯ ಪರಿವೀಕ್ಷಕ ಕೆ.ಎಂ.ಮಂಜುನಾಥ್, ಗ್ರಾಮಲೆಕ್ಕಾಧಿರಿಗಳಾದ ಸಂತೋಷ್, ವಿಶ್ವವಾಣಿ, ತೋಟಗಾರಿಕೆ ಶನಿವಾರಸಂತೆ ಹೋಬಳಿ ಅಧಿಕಾರಿ ಸಿಂಧು, ಶನಿವಾರಸಂತೆ ಕೃಷಿ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ವೇದಪ್ರಿಯ, ಕಾಫಿ ಮಂಡಳಿ ಸಂಪರ್ಕಾಧಿಕಾರಿ ವಿಶ್ವನಾಥ್, ಆಲೂರುಸಿದ್ದಾಪುರ ಗ್ರಾ.ಪಂ.ಪಿಡಿಒ ಪೂರ್ಣಿಮ, ಕಾರ್ಯದರ್ಶಿ ಚಂದ್ರೇಗೌಡ, ಕಂದಾಯ ಇಲಾಖೆಯ ರುದ್ರಯ್ಯ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss