Wednesday, August 10, 2022

Latest Posts

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಚಿತಾಗಾರದ ಅಗತ್ಯವಿದೆ: ಸಚಿವ ಸೋಮಣ್ಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ವಿದ್ಯುತ್ ಚಿತಾಗಾರದ ಅಗತ್ಯವಿದೆ. ಜಿಲ್ಲಾಧಿಕಾರಿಯವರು ಇದನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ ಚಿತಾಗಾರ ನಿರ್ಮಾಣಕ್ಕೆ ತಕ್ಷಣವೇ ಕ್ರಮವಹಿಸಬೇಕೆಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.
ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದಿಂದ ಶವ ಸಂಸ್ಕಾರಕ್ಕೆ ಸಹಜವಾಗಿ ತೊಂದರೆಯಾಗುತ್ತಿದ್ದು, ಅದಕ್ಕಾಗಿ ತಾತ್ಕಾಲಿಕ ಶೆಡ್ ಹಾಗೂ ಟಾರ್ಪಾಲಿನ್ ವ್ಯವಸ್ಥೆ ಮಾಡಲಾಗಿದೆ. ಆದರೂ ಮಳೆಗಾಲದಲ್ಲಿ ಶವ ಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರದ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನೇ ದಿನೇ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಪ್ರಮಾಣ ಹಾಗೂ ಆಕ್ಸಿಜನ್ ಅವಲಂಬಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಹೊರತುಪಡಿಸಿ ಯಾವುದೇ ಖಾಸಗಿ ಆಸ್ಪತ್ರೆ ಲಭ್ಯವಿಲ್ಲದಿರುವುದರಿಂದ ತುರ್ತು ಮುನ್ನೆಚ್ಚರಿಕಾ ಕ್ರಮವಾಗಿ ಕನಿಷ್ಟ 450 ಆಕ್ಸಿಜನ್ ಸಿಲಿಂಡರ್ ಗಳು, 5 ಎಲ್‍ಪಿಎಂನ ಕನಿಷ್ಟ 500 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು, 10 ಎಲ್.ಪಿ.ಎಂ.ನ ಕನಿಷ್ಟ 250 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು, 20 ವೆಂಟಿಲೇಟರ್ ಗಳು, 2000 ಆಕ್ಸಿ ಮೀಟರ್‌ಗಳು, 15,000 ರೆಮಿಡಿಸಿವಿರ್ ಇಂಜೆಕ್ಷನ್ ಸೇರಿದಂತೆ ಅಗತ್ಯ ಔಷಧಿಗಳನ್ನು ಜಿಲ್ಲೆಗೆ ತುರ್ತಾಗಿ ಸರಬರಾಜು ಮಾಡಲು ಮುಖ್ಯಮಂತ್ರಿಯವರನ್ನು ಕೋರಲಾಗಿದೆ.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಅವರು ತಕ್ಷಣ ಜಿಲ್ಲೆಗೆ ಈ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಲು ಸೂಚಿಸಿದ್ದು, ಅದರಂತೆ ಈಗಾಗಲೇ ಜಿಲ್ಲೆಗೆ 50 ಆಕ್ಸಿಜನ್ ಸಿಲಿಂಡರ್, 30 ಆಕ್ಸಿಜನ್ ಕಾನ್ಸಂಟ್ರೇಟರ್ , 10 ವೆಂಟಿಲೇಟರ್, 1500 ಆಕ್ಸಿಮೀಟರ್ ಹಾಗೂ 520 ರೆಮಿಡಿಸಿವರ್ ಇಂಜೆಕ್ಷನ್ ಹಾಗೂ ಅಗತ್ಯ ಔಷಧಿಗಳನ್ನು ಜಿಲ್ಲೆಗೆ ಸರಬರಾಜು ಮಾಡಲಾಗಿದೆ ಎಂದು ಸಚಿವ ವಿ.ಸೋಮಣ್ಣ ನುಡಿದರು.
ಜೊತೆಗೆ ಸಿ.ಎಸ್.ಆರ್ ನಿಧಿಯಿಂದ 57 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಜಿಲ್ಲೆಗೆ ಒದಗಿಸಲಾಗಿದೆ. ಅಲ್ಲದ ಸೋಂಕಿತರ ಚಿಕಿತ್ಸೆಗೆ ಯಾವುದೇ ಅಡಚಣೆಯಾಗದಂತೆ ಐವರ್‍ಮೆಕ್ಟಿನ್, ಡಾಕ್ಸಿಸೈಕ್ಲಿನ್, ಜಿಂಕ್, ‘ಸಿ’ ವಿಟಮಿನ್‍ನ ಮಾತ್ರೆಗಳನ್ನು ಖರೀದಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಮತ್ತು ಯಾವುದೇ ಮಟ್ಟದಲ್ಲಿ ಉದ್ಭವವಾಗುವ ತುರ್ತು ಸಂದರ್ಭಗಳನ್ನು ಅವಲೋಕಿಸಿ ಸಂದರ್ಭಕ್ಕೆ ಅನುಗುಣವಾಗಿ ಜಿಲ್ಲಾಧಿಕಾರಿ ಅವರು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.
ಕೋವಿಡ್-19 ವಿಚಾರದಲ್ಲಿ ಯಾವುದಾದರೂ ಅಪಚಾರಗಳಾದರೆ ರೋಗಿಗಳ ಹಿತದೃಷ್ಟಿಯಿಂದ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದರು.
ಜಿಲ್ಲೆಯ 13 ಕಡೆ ತೆರೆದಿರುವ ಚೆಕ್ ಪೋಸ್ಟ್ ಗಳಲ್ಲಿ ಕೈಗೊಳ್ಳಲಾಗುತ್ತಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಡಿಎಚ್ ಒ, ವೈದ್ಯಕೀಯ ಸಂಸ್ಥೆಯ ಡೀನ್ ಅವರು ಪ್ರತೀ ದಿನ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸಿ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ಮೇ 12 ರಂದು ಪುನಃ ಮುಖ್ಯಮಂತ್ರಿ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಖುದ್ದಾಗಿ ಚರ್ಚಿಸಲಾಗಿದ್ದು, ಈ ಅತ್ಯಗತ್ಯ ವೈದ್ಯಕೀಯ ಉಪಕರಣಗಳನ್ನು ಸದ್ಯದಲ್ಲೇ ಜಿಲ್ಲೆಗೆ ಒದಗಿಸುವ ವಿಶ್ವಾಸ ಹೊಂದಿರುವುದಾಗಿ ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss