ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಬುಧವಾರ 36 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ.
ಮಡಿಕೇರಿಯ ನವೋದಯ ಶಾಲೆಯ 21 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಆತಂಕ ಸೃಷ್ಟಿಯಾಗಿದೆ.
ಬುಧವಾರ ಪೂರ್ವಾಹ್ನ 11 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕು ಒಂದರಲ್ಲೇ 24 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಉಳಿದಂತೆ ವೀರಾಜಪೇಟೆ ತಾಲೂಕಿನಲ್ಲಿ 7, ಸೋಮವಾರಪೇಟೆ ತಾಲೂಕಿನಲ್ಲಿ 5 ಹೊಸ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಇದರೊಂದಿಗೆ ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 35,250ರಷ್ಟಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 15 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ ಒಟ್ಟು 34,727 ಮಂದಿ ಗುಣಮುಖರಾದಂತಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಒಬ್ಬರು ಸಾವಿಗೀಡಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 430ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ 93 ಸಕ್ರಿಯ ಪ್ರಕರಣಗಳಿದ್ದು, ಕಂಟೈನ್ಮೆಂಟ್ ವಲಯಗಳ ಸಂಖ್ಯೆ 20 ಹಾಗೂ ಕೋವಿಡ್ ಪಾಸಿಟಿವಿಟಿ ದರ ಶೇ.1.21ರಷ್ಟಿದೆ ಎಂದು ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
21 ವಿದ್ಯಾರ್ಥಿಗಳಿಗೆ ಸೋಂಕು: ಮಡಿಕೇರಿ ನಗರದ ಹೊರವಲಯದಲ್ಲಿರುವ ನವೋದಯ ಶಾಲೆಯ 21 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಶಾಲೆಯ ಕೆಲವು ವಿದ್ಯಾರ್ಥಿಗಳ್ಲಿ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 270 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 21 ಮಂದಿಯ ವರದಿಯಲ್ಲಿ ಪಾಸಿಟಿವ್ ಬಂದಿದೆ. ಶಾಲಾ ಸಿಬ್ಬಂದಿ ಹಾಗೂ ಉಳಿದ ವಿದ್ಯಾರ್ಥಿಗಳನ್ನು ಬುಧವಾರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸೋಂಕು ಪತ್ತೆಯಾಗಿರುವ 18 ಮಕ್ಕಳನ್ನು ಮಡಿಕೇರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಉಳಿದ ಮೂವರು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.