ಕೊಡಗು: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ; ರಾಜೀನಾಮೆಗೆ ನಿರ್ಧರಿಸಿದ ಗ್ರಾಪಂ ಸದಸ್ಯರು

ಹೊಸದಿಗಂತ ವರದಿ, ಗೋಣಿಕೊಪ್ಪ
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಲು ಅನುಮತಿ ನೀಡಬಾರದೆಂದು ನಿರ್ಣಯಿಸಿದ್ದರೂ, ಅದನ್ನು ನಿರ್ಲಕ್ಷಿಸಿ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದನ್ನು ಖಂಡಿಸಿ ಪಂಚಾಯಿತಿ ಸದಸ್ಯರುಗಳು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿರುವುದಾಗಿ ಹಾತೂರು ಗ್ರಾಮ ಪಂಚಾಯಿತಿ ಸದಸ್ಯರುಗಳು ಘೋಷಿಸಿದ್ದಾರೆ.
ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಚಿಣ್ಣಪ್ಪ, ಪೊನ್ನಮ್ಮ, ಎ.ಎಂ. ಸುಮಿತಾ, ಸುಮಾ ಅಶೋಕ್, ಅಕ್ಕಮ್ಮ ಉತ್ತಪ್ಪ ಅವರುಗಳು ಈ ವಿಚಾರವನ್ನು ಬಹಿರಂಗ ಪಡಿಸಿದರು.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 3ನೇ ವಾರ್ಡ್’ಗೆ ಸಂಬಂಧಿಸಿದ ಕಾಪ್ಸ್ ಶಾಲೆಯ ಸಮೀಪ ಎಂ.ಯು. ನಂಜಪ್ಪ ಅವರ ಕಟ್ಟಡ ನಿರ್ಮಾಣದಲ್ಲಿ ಪಂಚಾಯಿತಿ ನಿಯಂತ್ರಣ ಮಾದರಿ ಉಪವಿಧಿ 2015ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅಲ್ಲದೇ 9 ಮತ್ತು 11 ಎ ನಮೂನೆಯನ್ನು ನೀಡಲು ನಿರ್ಧರಿಸಿದ್ದಾರೆ. ಇದು ಪಂಚಾಯಿತಿ ನಿಯಮ ಉಲ್ಲಂಘನೆಯಾಗಿದೆ. ಕಟ್ಟಡ ನಿರ್ಮಾಣವಾದರೆ ಅನಾಹುತಗಳಿಗೆ ದಾರಿಯಾಗುತ್ತದೆ ಎಂದು ಸದಸ್ಯರುಗಳು ಆತಂಕ ವ್ಯಕ್ತಪಡಿಸಿದರು.
ಪಂಚಾಯಿತಿ ಆಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದರೂ ಅವರ ಅನುಮತಿಯನ್ನು ಮತ್ತು ಅಭಿಪ್ರಾಯವನ್ನು ನಿರ್ಲಕ್ಷಿಸಿ ನಂಜಪ್ಪ ಅವರ ಅಪಾರ್ಟ್‍ಮೆಂಟ್‍ಗೆ ಅನುಮತಿ ನೀಡುತ್ತಿರುವುದು ಚುನಾಯಿತ ಸದಸ್ಯರುಗಳನ್ನು ಕಡೆಗಣಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ಪಂಚಾಯಿತಿಯ ನಿಯಮವನ್ನು ಗಾಳಿಗೆ ತೂರಿ ನಂಜಪ್ಪ ಅವರ ಅಪಾರ್ಟ್‌ ಮೆಂಟ್‌ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಿನ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೂ, ಮಾಲಕರು ತಮ್ಮ ಪ್ರಭಾವ ಬಳಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಯತ್ನಿಸುತ್ತಿದ್ದಾರೆ. ಸ್ಥಳೀಯ ಪಂಚಾಯಿತಿ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕಾಗಿದೆ ಎಂದು ಹೇಳಿದ ಅವರು, ಈ ಅವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸುವುದರ ಜತೆಗೆ ರಾಜಿನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!