ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಡಗು| ಸಫಾಯಿ ಕರ್ಮಚಾರಿಗಳ ಸಮೀಕ್ಷೆ: ಶೀಘ್ರ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ

ಹೊಸದಿಗಂತ ವರದಿ, ಕೊಡಗು:

ಜಿಲ್ಲೆಯ ನಗರ, ಪಟ್ಟಣ, ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿ, ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷೆ ಕೈಗೊಂಡು ಶೀಘ್ರ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿ-ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂಬಂಧ ಮಾಹಿತಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರು, ಮೇ ತಿಂಗಳ ಅಂತ್ಯದೊಳಗೆ ಸಫಾಯಿ ಕರ್ಮಚಾರಿಗಳ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ವ್ಯಾಪಕವಾಗಿ ಮಾಹಿತಿ ನೀಡಿದ ಸಮೀಕ್ಷಾ ವರದಿಯನ್ನು ಸಲ್ಲಿಸಬೇಕಿದೆ ಎಂದು ತಿಳಿಸಿದರು.

ಪ್ರತೀ ಮನೆ ಮನೆಗೆ ಭೇಟಿ ನೀಡಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ವೃತ್ತಿಯಲ್ಲಿ ತೊಡಗಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ವರದಿ ನೀಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮಸಭೆ ನಡೆಸಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಮಾಹಿತಿ ಒದಗಿಸಬೇಕಿದೆ ಎಂದು ಶೇಖರ್ ಮಾಹಿತಿ ನೀಡಿದರು.

ಏಪ್ರಿಲ್, 21 ರಂದು ಗ್ರಾ.ಪಂ.ಮಟ್ಟದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆ ಸಭೆ ನಡೆಸುವುದು, ಏ.22 ರಂದು ಮೊದಲನೇ ವಿಶೇಷ ಗ್ರಾಮ ಸಭೆ ನಡೆಸುವುದು, ಏ.23 ರಂದು ಜಿಲ್ಲೆಯ ಎಲ್ಲಾ ಗ್ರಾ.ಪಂ. ಮಟ್ಟದಲ್ಲಿ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸುವುದು. ಏ.29 ರಂದು ಎರಡನೇ ವಿಶೇಷ ಗ್ರಾಮ ಸಭೆ ನಡೆಸುವುದು. ಮೇ 3 ರಂದು ಗ್ರಾ.ಪಂ.ಗಳಲ್ಲಿ ಅನೈರ್ಮಲ್ಯ ಶೌಚಾಲಯಗಳು ಇರುವ ಅಥವಾ ಇಲ್ಲದಿರುವ ಕುರಿತಂತೆ ದೃಢೀಕರಣ ಪತ್ರ ಸಲ್ಲಿಸುವುದು ಹಾಗೂ ಪಂಚತಂತ್ರದಲ್ಲಿ ಮಾಹಿತಿ ಅಳವಡಿಸುವುದು ಮತ್ತು ಸಂಬಂಧಿಸಿದ ತಾ.ಪಂ.ಗೆ ವರದಿ ಸಲ್ಲಿಸುವುದು.

ಮೇ 5 ರಂದು ತಾ.ಪಂ. ವ್ಯಾಪ್ತಿಗೆ ಬರುವ ಎಲ್ಲಾ ಗ್ರಾ.ಪಂ.ಗಳ ಮಾಹಿತಿ ಕ್ರೋಢೀಕರಿಸಿ ಜಿ.ಪಂ.ಗೆ ವರದಿ ಸಲ್ಲಿಸುವುದು. ಮೇ. 7 ರಂದು ಜಿ.ಪಂ.ಗಳ ವ್ಯಾಪ್ತಿಗೆ ಬರುವ ಎಲ್ಲಾ ತಾ.ಪಂ.ಗಳಿಂದ ಮಾಹಿತಿ ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.

ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅದರ ಪುನರ್ವಸತಿ ಅಧಿನಿಯಮ 2013 ಅನ್ವಯ ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಗಳ ಗಣತಿಯನ್ನು ಏಪ್ರಿಲ್ 21 ರಿಂದ ಏಪ್ರಿಲ್ 23 ರ ತನಕ ಮೂರು ದಿನಗಳ ಕಾಲ ಸಮೀಕ್ಷೆ ಶಿಬಿರ ಆಯೋಜಿಸಿ ಅರ್ಜಿ ಸ್ವೀಕರಿಸಬೇಕಿದೆ. ನಗರ ಪ್ರದೇಶದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಗಳ ಗಣತಿಯನ್ನು ಏಪ್ರಿಲ್ 26 ರಿಂದ ಏಪ್ರಿಲ್ 28 ರ ತನಕ ಮೂರು ದಿನಗಳ ಕಾಲ ನಗರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಅರ್ಜಿ ಸ್ವೀಕಾರ ಮತ್ತು ಪರಿಶೀಲನೆ ನಡೆಸಲು ಸರ್ಕಾರದಿಂದ ಆದೇಶಿಸಲಾಗಿದೆ ಎಂದರು.

ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಯತ್‌ಗಳ ಸಮೀಕ್ಷಾ ತಂಡದ ಪ್ರತಿನಿಧಿಗಳು ನಗರ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ.ಸಮೀಕ್ಷಾ ತಂಡದವರು ಸಮೀಕ್ಷೆ ನಡೆಸುವ ಸಮಯದಲ್ಲಿ ಸಾರ್ವಜನಿಕರು ಅಲ್ಲದೇ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಗಳು ತಾವಾಗಿಯೇ ಖುದ್ದು ಸ್ಥಳೀಯ ಕಚೇರಿಗೆ ಹಾಜರಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶೇಖರ್ ಅವರು ಮಾಹಿತಿ ನೀಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು, ಗ್ರಾ.ಪಂ.ಮಟ್ಟದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ವೃತ್ತಿಯಲ್ಲಿ ತೊಡಗಿದ್ದಲ್ಲಿ ಈ ಸಂಬಂಧ ಗ್ರಾ.ಪಂ. ಪಿಡಿಒಗಳಿಗೆ ಮಾಹಿತಿ ಒದಗಿಸುವಂತೆ ತಿಳಿಸಲಾಗುವುದು ಎಂದು ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜು ಅವರು ಮಾಹಿತಿ ನೀಡಿ,ಜಿಲ್ಲೆಯ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಗಳ ಸಮೀಕ್ಷೆ ಕೈಗೊಳ್ಳುವ ಸಂಬಂಧ ಈಗಾಗಲೇ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಡಿಡಿಪಿಐ ಮಚ್ಚಾಡೋ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss