Wednesday, August 17, 2022

Latest Posts

ಕೊಡಗಿನಲ್ಲಿ ಎರಡು ತಿಂಗಳು ಪ್ರವಾಸೋದ್ಯಮ ಚಟುವಟಿಕೆ ಬಂದ್ ಮಾಡಲು ಒತ್ತಾಯ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಏರಿಳಿತದ ನಡುವೆಯೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿರುವ ಸರಕಾರ ಹಾಗೂ ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಸಮಾನ ಮನಸ್ಕರನ್ನು ಒಳಗೊಂಡ ‘ಸೇವ್ ಕೊಡಗು ಫ್ರಂ ಟೂರಿಸಂ’ ಸಂಘಟನೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಕನಿಷ್ಟ ಎರಡು ತಿಂಗಳ ಕಾಲ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟಿವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಅಕ್ಟೋಬರ್‌ನಲ್ಲಿ ತುಲಾ ಸಂಕ್ರಮಣದಂದು ನಡೆಯುವ ಕಾವೇರಿ ತೀರ್ಥೋದ್ಭವ ಹಾಗೂ ನಂತರದ ಒಂದು ತಿಂಗಳ ಕಾಲ ನಡೆಯಲಿರುವ ಜಾತ್ರೆ ಹಾಗೂ ಶಾಲಾ-ಕಾಲೇಜುಗಳ ಪುನರಾರಂಭದ ಹಿನ್ನೆಲೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಕಠಿಣ ನಿಯಮವನ್ನು ಜಾರಿಗೊಳಿಸಬೇಕೆಂದು ಸಂಘಟನೆಯ ಪ್ರಮುಖರು ಒತ್ತಾಯಿಸಿದರು.
ಗಡಿರಾಜ್ಯ ಕೇರಳದಲ್ಲಿ ಕೋವಿಡ್ ಹಾಗೂ ನಿಫಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಎಲ್ಲಾ ಗಡಿಗಳಿಂದಲೂ ಪ್ರವಾಸಿಗರನ್ನು ಒಳಬರದಂತೆ ತಡೆಯಬೇಕು. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ಕಳೆದ ಬಾರಿ ಜಿಲ್ಲಾಡಳಿತದ ವೈಫಲ್ಯದಿಂದ ತುಲಾ ಸಂಕ್ರಮಣದ ಸಂದರ್ಭ ಗೊಂದಲ ಉಂಟಾಗಿದ್ದು, ಕೊಡಗಿನ ಮೂಲ ನಿವಾಸಿಗಳಿಗೆ ಅತೀವ ನೋವುಂಟಾಗಿದೆ. ಈ ಬಾರಿ ಆ ರೀತಿ ಆಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿಬೇಕು. ಕೊಡಗಿನ ಮೂಲ ನಿವಾಸಿಗಳಿಗೆ ಈ ಬಾರಿಯ ಹಬ್ಬದಲ್ಲಿ ಭಾಗಿಯಾಗಲು ಮುಕ್ತ ಅವಕಾಶ ಕೊಡಬೇಕು. ಹೊರಗಿನಿಂದ ಜಾತ್ರೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮುಂಗಡ ಹೆಸರು ನೊಂದಾಯಿಸಿಕೊಂಡು, ಕೋವಿಡ್ ನೆಗೆಟಿವ್ ರಿಪೋರ್ಟ್‍ನೊಂದಿಗೆ ಭಾಗವಹಿಸಲು ಮಾತ್ರ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸಂಘಟನೆಯ ಸಂಚಾಲಕ ಚಮ್ಮಟಿರ ಪ್ರವೀಣ್ ಉತ್ತಪ್ಪ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆ ಹಾಗೂ ಜಾತಿ ಜನಾಂಗಗಳ 30ಕ್ಕೂ ಅಧಿಕ ಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!