Sunday, August 14, 2022

Latest Posts

ಕೊಡಗಿನ ಎರಡು ನೂತನ ತಾಲೂಕುಗಳಲ್ಲಿ ಹುದ್ದೆಗಳೆಲ್ಲವೂ ಖಾಲಿ ಖಾಲಿ!

ಹೊಸದಿಗಂತ ವರದಿ, ಕೊಡಗು:

ಜಿಲ್ಲೆಗೆ ಎರಡು ಹೊಸ ತಾಲೂಕುಗಳನ್ನು ಸರಕಾರ ಘೋಷಣೆ ಮಾಡಿದ್ದರೂ, ತಹಶೀಲ್ದಾರರ ಹುದ್ದೆಯೂ ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ.
ವಿಧಾನ ಪರಿಷತ್ ನಲ್ಲಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಈ ಕುರಿತು ಪ್ರಸ್ತಾಪಿಸಿದ್ದು, ಖಾಲಿ ಹುದ್ದೆಗಳನ್ನು ಕಾಲಕಾಲಕ್ಕೆ ನಡೆಯುವ ನೇಮಕಾತಿ, ಮುಂಬಡ್ತಿ ಹಾಗೂ ವರ್ಗಾವಣೆ ಸಂದರ್ಭದಲ್ಲಿ ಭರ್ತಿ ಮಾಡಲು ಕ್ರಮಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ಹೊಸದಾಗಿ ರಚನೆಯಾಗಿರುವ ಪೊನ್ನಂಪೇಟೆ ಹಾಗೂ ಕುಶಾಲನಗ ತಾಲೂಕಿಗೆ ತಲಾ ಒಬ್ಬರು ಗ್ರೇಡ್ 1 ತಹಶಿಲ್ದಾರರು, ಶಿರಸ್ತೇದಾರ, ಆಹಾರ ನಿರೀಕ್ಷಕ, ಬೆರಳಚ್ಚುಗಾರ, ವಾಹನ ಚಾಲಕ, ತಲಾ ಇಬ್ಬರು ಪ್ರಥಮ ದರ್ಜೆ ಸಹಾಯಕರು ಮತ್ತು ಗ್ರೂಪ್ ಡಿ ನೌಕರರು, ಮೂವರು ದ್ವಿತೀಯ ದರ್ಜೆ/ಸಹಾಯಕರ ಹುದ್ದೆಗಳನ್ನು ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಪೈಕಿ ಬೆರಳಚ್ಚುಗಾರ, ಚಾಲಕ ಹಾಗೂ ಗ್ರೂಪ್ ಡಿ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆಯೂ ಸೂಚಿಸಿತ್ತು.
ಆದರೆ ಈ ಪೈಕಿ ಪೊನ್ನಂಪೇಟೆ ತಾಲೂಕಿಗೆ ಒಬ್ಬರು ಶಿರಸ್ತೇದಾರ, ಕುಶಾಲನಗರ ತಾಲೂಕಿಗೆ ಒಬ್ಬರು ತಹಶೀಲ್ದಾರರು, ಶಿರಸ್ತೇದಾರ ಹಾಗೂ ಪ್ರಥಮ ದರ್ಜೆ ನೌಕರರನ್ನು ಮಾತ್ರ ಸರಕಾರ ನೇಮಿಸಿದೆ.
ಉಳಿದಂತೆ ಪೊನ್ನಂಪೇಟೆ ತಾಲೂಕಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರರನ್ನು ಪ್ರಭಾರ ಹುದ್ದೆಯಲ್ಲಿಡಲಾಗಿದ್ದು, ಅವರದ್ದೇ ಕಚೇರಿಯ ತಲಾ ಒಬ್ಬರು ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಹಾಗೂ
ಕುಶಾಲನಗರ ತಾಲೂಕು ಕಚೇರಿಗೆ ಸೋಮವಾರಪೇಟೆ ತಾಲೂಕು ಕಚೇರಿಯಿಂದ ತಲಾ ಒಬ್ಬರು ಪ್ರಥಮ ಮತ್ತು ದ್ವಿತೀಯ ದರ್ಜೆ ನೌಕರರನ್ನು ನಿಯೋಜಿಸಿದೆ.
ಉಳಿದಂತೆ ಹೊರಗುತ್ತಿಗೆ ಆಧಾರದ ಹುದ್ದೆಗಳನ್ನು ಅನುದಾನದ ಲಭ್ಯತೆಯನ್ನು ಆಧರಿಸಿ ಭರ್ತಿ ಮಾಡಿಕೊಳ್ಳುವುದಾಗಿಯೂ ತಿಳಿಸಿದೆ.
ಸರಕಾರದ ಈ ನಿರ್ಧಾರದಿಂದಾಗಿ ನೂತನ ತಾಲೂಕು ರಚನೆಯಾಗಿದ್ದರೂ, ಆದರ ಪೂರ್ಣಪ್ರಮಾಣದ ಪ್ರಯೋಜನ ಸಾರ್ವಜನಿಕರಿಗೆ ಲಭಿಸದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss