ಹೊಸದಿಗಂತ ವರದಿ, ಕೊಡಗು:
ಮಡಿಕೇರಿಯಲ್ಲಿ ನಿರ್ಮಿಸಲಾಗುತ್ತಿರುವ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು 2021ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.
ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಯ ಪ್ರಗತಿ, ಅನುಮೋದನೆ ಹಾಗೂ ಅನುದಾನಗಳ ವಿವರ ನೀಡುವಂತೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಸರಕಾರವನ್ನು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ಆನಂದ್ ಸಿಂಗ್, ಕೊಡವ ಹೆರಿಟೇಜ್ ಸೆಂಟರ್ ಕಟ್ಟಡ ಕಾಮಗಾರಿಯಲ್ಲಿ ಐನ್ಮನೆಗಳ ಮೇಲ್ಛಾವಣಿ ಕೆಲಸ ಪೂರ್ಣವಾಗಿವೆ. ನೆಲಹಾಸು, ವಿದ್ಯುದೀಕರಣ ಮತ್ತಿತರ ಕೆಲಸಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.
ಗುತ್ತಿಗೆ ರದ್ದು: ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿಗೆ 2010-11ನೇ ಸಾಲಿನಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಲು ವಿಫಲರಾದ ಕಾರಣ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದು ಮಾಡಲಾಗಿದೆ. ಉಳಿದ ಕಾಮಗಾರಿಗೆ ಟೆಂಡರ್ ಕರೆದು ಗುತ್ತಿಗೆಯನ್ನು ವಹಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
ಹೆರಿಟೇಜ್ ಸೆಂಟರ್ ಯೋಜನೆಯ ಅಂದಾಜು ವೆಚ್ಚ 330.45 ಲಕ್ಷ ರೂ.ಗಳಾಗಿದೆ. ಇದುವರೆಗೆ 253.54 ಲಕ್ಷ ರೂ.ಗಳನ್ನು ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗೆ 250.39 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಸಚಿವ ಆನಂದ್ ಸಿಂಗ್ ನುಡಿದರು.