ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.
ಘಟನೆ ಕುರಿತು ಕಡೆಗೂ ಮೌನ ಮುರಿದ ರಾಹುಲ್, ಮೊದಲ ಪ್ರತಿಕ್ರಿಯೆಯಲ್ಲಿ, ಪ್ರಕರಣದ ನಿರ್ವಹಣೆಯನ್ನು ಟೀಕಿಸಿದರು. ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
ಆಕೆಯ ಮೇಲೆ ತೋರಿದ ಕ್ರೂರ ಮತ್ತು ಅಮಾನವೀಯ ಕೃತ್ಯಗಳು ಬಹಿರಂಗವಾಗುತ್ತಿರುವ ರೀತಿ ನೋಡಿದರೆ ವೈದ್ಯ ಸಮುದಾಯ ಮತ್ತು ಮಹಿಳೆಯರಲ್ಲಿ ಅಭದ್ರತೆಯ ವಾತಾವರಣವಿದೆ ಎನಿಸದಿರದು. ಸಂತ್ರಸ್ತೆಗೆ ನ್ಯಾಯ ಒದಗಿಸುವ ಬದಲು ಆರೋಪಿಯನ್ನು ರಕ್ಷಿಸುವ ಪ್ರಯತ್ನ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಮೆಡಿಕಲ್ ಕಾಲೇಜಿನಂತಹ ಜಾಗದಲ್ಲಿ ವೈದ್ಯರೇ ಸುರಕ್ಷಿತವಾಗಿಲ್ಲ ಎಂದಾದರೆ ಯಾವ ಆಧಾರದಲ್ಲಿ ಪಾಲಕರು ತಮ್ಮ ಹೆಣ್ಣುಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳೂಹಿಸುವುದು? ನಿರ್ಭಯಾ ಪ್ರಕರಣದ ನಂತರ ಮಾಡಿದ ಕಟ್ಟುನಿಟ್ಟಿನ ಕಾನೂನುಗಳು ಇಂತಹ ಅಪರಾಧಗಳನ್ನು ತಡೆಯಲು ಏಕೆ ವಿಫಲವಾಗಿವೆ? ಹತ್ರಾಸ್‌ನಿಂದ ಉನ್ನಾವ್‌ವರೆಗೆ ಮತ್ತು ಕಥುವಾದಿಂದ ಕೋಲ್ಕತ್ತಾದವರೆಗೆ ನಿರಂತರವಾಗಿ ಹೆಚ್ಚುತ್ತಿರುವ ಮಹಿಳೆಯರ ವಿರುದ್ಧದ ಘಟನೆಗಳ ಕುರಿತು ಪ್ರತಿಯೊಂದು ಪಕ್ಷ ಮತ್ತು ಪ್ರತಿಯೊಂದು ವಿಭಾಗವು ಒಟ್ಟಾಗಿ ಗಂಭೀರವಾದ ಚಿಂತನೆ ನಡೆಸಬೇಕಿದೆ. ಈ ಅಸಹನೀಯ ಸಂಕಟದಲ್ಲಿ ಸಂತ್ರಸ್ತೆ ಕುಟುಂಬದೊಂದಿಗೆ ನಾನು ನಿಂತಿದ್ದೇನೆ. ಪ್ರತಿಯೊಂದು ಸಂದರ್ಭದಲ್ಲೂ ಅವರಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥರಿಗೆ ಇಂತಹ ಶಿಕ್ಷೆಯಾಗಬೇಕು. ಅದು ಸಮಾಜದಲ್ಲಿ ಮಾದರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.