Sunday, September 25, 2022

Latest Posts

ಆಂಗ್ಲ ಅಧಿಕಾರಿ ಕಾರಿನ ಮೇಲೆ ಬಾಂಬ್‌ ಎಸೆದು 17 ನೇ ವಯಸ್ಸಿನಲ್ಲೇ ಹುತಾತ್ಮನಾಗಿದ್ದ ಕೃಷ್ಣಕುಮಾರ…

ಹೊಸದಿಗಂತ ಡಿಜಿಟಲ್‌ ಡೆಸ್ಕ್(‌ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ಹದಿನೇಳನೇ ವಯಸ್ಸಿನಲ್ಲಿ ಹುತಾತ್ಮರಾದ ಕೃಷ್ಣಕುಮಾರ್ ಚೌಧರಿ (1916-1934) ಅವಿಭಜಿತ ಬಂಗಾಳದ ಚಟ್ಟಗ್ರಾಮದ ಕೇಲಿಶಹರ್‌ನಲ್ಲಿ ಹೇಮಂದ್ರಲಾಲ್ ಚೌಧರಿಯವರ ಪುತ್ರನಾಗಿ ಜನಿಸಿದರು. ಅವರು ತಮ್ಮ ಹದಿಹರೆಯದ ಪ್ರಾರಂಭದ ದಿನಗಳಲ್ಲೇ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬಂದರು.
ಕ್ರಾಂತಿಕಾರಿ ಅನಂತ ಸಿಂಗ್ ಅವರ ಕಟ್ಟಾ ಅನುಯಾಯಿಯಾಗಿದ್ದ ಎಳೆ ಹುಡುಗ ಕೃಷ್ಣಕುಮಾರ್ ಅವರು ಎಲ್ಲಾ ಹಿರಿಯ ಕ್ರಾಂತಿಕಾರಿ ನಾಯಕರ ಪ್ರೀತಿಯ ಶಿಷ್ಯನಾಗಿದ್ದರು. ಆತನ ಅದಮ್ಯ ದೇಶಪ್ರೇಮ, ಸಂಘಟನೆಯ ಚಾತುರ್ಯ ಇತರ ಹೋರಾಟಗಾರರನ್ನು ದಂಗುಬಡಿಸುವಂತಿತ್ತು. ಅದೇ ಸಂದರ್ಭದಲ್ಲಿ ಬಂಗಾಳದ ಜಲಾಲಾಬಾದ್ ಬೆಟ್ಟದಲ್ಲಿ ಕ್ರಾಂತಿಕಾರಿ ಹೋರಾಟಗಾರರು ಹಾಗೂ ಬ್ರಿಟೀಷರ ನಡುವೆ 1930 ರ ಏಪ್ರಿಲ್ 18 ಭೀಕರ ಕಾಳಗ ನಡೆಯಿತು. ದಂಗೆಯೆದ್ದಿದ್ದ ಕ್ರಾಂತಿಕಾರಿ ನಾಯಕರು ಬ್ರಟೀಷ್‌ ಸರ್ಕಾರದ ಪ್ರಮುಖ ಸ್ಥಳಗಳೆಗೆ ದಾಳಿಯಿಟ್ಟು ಬ್ರಿಟೀಷರನ್ನು ತಲ್ಲಣಗೊಳಿಸಿದ್ದರು. ಆ ಬಳಿಕ ಆಂಗ್ಲರು ಬಹಳವೇ ಕಷ್ಟಪಟ್ಟು ಈ ಕ್ರಾಂತಿಯನ್ನು ಮಟ್ಟ ಹಾಕಿದ್ದರು.
ಈ ದಂಗೆಯ ಪ್ರಮುಖ ನಾಯಕರನ್ನು ಆ ಬಳಿಕ ಬಂಧಿಸಿದ್ದರು. 1934 ರಲ್ಲಿ ವಿಚಾರಣೆಯು ಕೊನೆಗೊಂಡಾಗ ಮತ್ತು ಕ್ರಾಂತಿಕಾರಿ ಸೂರ್ಯ ಸೇನ್ ಮತ್ತು ತಾರಕೇಶ್ವರ ದಸ್ತಿದಾರ್ ಅವರಿಗೆ ಮರಣದಂಡನೆ ವಿಧಿಸಿದ ಸುದ್ದಿಕೇಳಿ ಬಂಗಾಳಿಗಳು ಬ್ರಿಟೀಷರ ವಿರುದ್ಧ ಕುದ್ದುಹೋದರು. ಕ್ರಾಂತಿಕಾರಿಗಳು ದೇಶಭಕ್ತರನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿದರು. ಕ್ರಾಂತಿಕಾರಿಗಳ ಹೊಸ ನಾಯಕರಾಗಿ ಆಯ್ಕೆಯಾಗಿದ್ದ ಬಿನೋದ್ ದತ್ತ ಅವರು ಕ್ರಾಂತಿಕಾರಿಗಳನ್ನು ಬಂಧಿಸಿಟ್ಟಿದ್ದ ಜೈಲಿಗೇ ಡೈನಮೈಟ್ ಇಟ್ಟು ಉಡಾಯಿಸುವ ಮೂಲಕ ಇಬ್ಬರು ಕ್ರಾಂತಿಕಾರಿಗಳನ್ನು ಮುಕ್ತಗೊಳಿಸಲು ಯತ್ನಿಸಿದ್ದರು. ಆದರೆ, ಅದೂ ಸಹ ಯಶಸ್ವಿಯಾಗಲಿಲ್ಲ.
ಸೂರ್ಯ ಸೇನ್‌ ಹಾಗೂ ತಾರಕೇಶ್ವರ ದಸ್ತಿದಾರ್ ರ ಮರಣ ದಂಡನೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಆದರೆ ಇದರ ವಿರುದ್ಧ ಬ್ರಿಟೀಷರ ಮೇಲೆ ಪ್ರತೀಕಾರವನ್ನಂತೂ ತೀರಿಸಿಕೊಳ್ಳಬೇಕಿತ್ತು. ಈ ಕಾರ್ಯಕ್ಕೆ ಸಜ್ಜಾಗಿ ನಂತವನೇ ಕೃಷ್ಣಕುಮಾರ್. 1934 ರ ಜನವರಿ 7 ರಂದು   ಇತರ ನಾಲ್ವರು ಹುಡುಗರೊಂದಿಗೆ ಸೇರಿಕೊಂಡ 17ರ ಹರೆಯದ ಕೃಷ್ಣಕುಮಾರ್ ಬ್ರಿಟೀಷರು ಕ್ರಿಕೆಟ್ ಪಂದ್ಯಾವಳಿಯನ್ನು ಆಡುತ್ತಿದ್ದ  ಮಿಲಿಟರಿ ಮೈದಾನದತ್ತ ಬಂದ. ಕ್ರಾಂತಿಕಾರಿಗಳ ಸಾವಿಗೆ ಕಾರಣನಾಗಿದ್ದ ಪೊಲೀಸ್ ಸೂಪರಿಡೆಂಟ್ ಪೀಟರ್ ಕ್ಲೀಯರಿ ಪಂದ್ಯದ ನಂತರ ಹಿಂದಿರುಗುತ್ತಿದ್ದಾಗ ಅವನ ಕಾರಿನ ಮೇಲೆ ಬಾಂಬ್‌ಗಳನ್ನು ಎಸೆದರು. ಆದರೆ ದುರಾದೃಷ್ಟ ನೋಡಿ, ಅದು ಸಿಡಿಯಲಿಲ್ಲ. ಹುಡುಗರು ಎಣಿಸಿದ್ದು ಯಾವುದೂ ಅಲ್ಲಿ ನಡೆಯಲೇ ಇಲ್ಲ. ಆ ವೇಳೆಗೆ ಒಬ್ಬ ಕ್ರಾಂತಿಕಾರಿ ನಿತ್ಯರಂಜನ್ ಸೇನ್ ಅವರನ್ನು ಪಿಯರಿಯ ಕಾರಿನ ಚಾಲಕ ಗುಂಡಿಕ್ಕಿ ನಿರ್ದಾಕ್ಷಿಣ್ಯವಾಗಿ ಕೊಂದುಹಾಕಿದ. ಇನ್ನೊಬ್ಬ ಹೋರಾಟಗಾರ ಹಿಮಾಂಗ್ಶು ಬಿಮಲ್ ಚಕ್ರವರ್ತಿ ತಮ್ಮನ್ನು ರಕ್ಷಿಸಿಕೊಳ್ಳಲು ಬೆಟ್ಟದ ಕೆಳಗೆ ಓಡುತ್ತಿದ್ದವರು  ಪೊಲೀಸರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಕೃಷ್ಣಕುಮಾರ್ ಮತ್ತು ಅವರ ಸ್ನೇಹಿತ ಹರೇಂದ್ರಲಾಲ್ ಚಕ್ರವರ್ತಿ ಅವರನ್ನು ಬಂಧಿಸಲಾಯಿತು. ಪುಟ್ಟ ಬಾಲಕರು ಎಂಬುದನ್ನೂ ಲೆಕ್ಕಿಸದ ಬ್ರಿಟೀಷ್ ವಿಶೇಷ ನ್ಯಾಯಮಂಡಳಿ ಅವರಿಗೆ ಮರಣದಂಡನೆ ವಿಧಿಸಿತು. ಅವರನ್ನು ಮಿಡ್ನಾಪುರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು  5 ಜೂನ್ 1934 ರಂದು ಗಲ್ಲಿಗೇರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!