ಕುಕ್ಕುಡೇಶ್ವರ,ನೇತ್ರಾಣಿ ದೇವಿಯ ಜಾತ್ರಾ ಮಹೋತ್ಸವ: ಅಂಕೋಲಾದಲ್ಲಿ ಪೂರ್ವಭಾವಿ ಸಭೆ

ದಿಗಂತ ವರದಿ ಅಂಕೋಲಾ:

ತಾಲೂಕಿನ ಬೆಲೇಕೇರಿ ಮತ್ತು ಹಾರವಾಡ ನಡುವಿನ ಕಡಲ ಮದ್ಯದಲ್ಲಿರುವ ಮೀನುಗಾರರ ಆರಾಧ್ಯ ಸ್ಥಳ ಕುಕ್ಕುಡ ನಡುಗಡ್ಡೆಯ ಕುಕ್ಕುಡೇಶ್ವರ ಮತ್ತು ನೇತ್ರಾಣಿ ದೇವಿಯ ಜಾತ್ರಾ ಮಹೋತ್ಸವದ ಕುರಿತು ಪೂರ್ವಭಾವಿ ಸಭೆ ತಹಶೀಲ್ಧಾರ ಉದಯ ಕುಂಬಾರ ಅವರ ಅಧ್ಯಕ್ಷತೆಯಲ್ಲಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯಿತು.
ಸಭೆಯಲ್ಲಿ ತಹಶೀಲ್ಧಾರ ಉದಯ ಕುಂಬಾರ ಮಾತನಾಡಿ ಕೋವಿಡ್ ನಿಯಮಗಳು ಜಾರಿಯಲ್ಲಿ ಇರುವುದರಿಂದ ದೇವರ ಸನ್ನಿಧಿಯಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದ ಪೂಜಾ ಕಾರ್ಯಕ್ಕೆ ನಿಯಮಿತ ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆಯ ಶರತ್ತುಗಳೊಂದಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ನಡುಗಡ್ಡೆಗೆ ತೆರಳಲು ಕೇವಲ 6 ಬೋಟುಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು ಆ ಕುರಿತು ಮೀನುಗಾರಿಕೆ ಇಲಾಖೆಗೆ ಬೋಟುಗಳ ಮಾಹಿತಿ ನೀಡಿ ನೊಂದಾಯಿಸಿಕೊಳ್ಳಬೇಕು, ಬೋಟುಗಳು ಬೆಲೇಕೇರಿ ಕಡಲ ತೀರದಿಂದಲೇ ತೆರಳಬೇಕು ಅನುಮತಿ ಇಲ್ಲದೇ ದೋಣಿ ಮತ್ತು ಬೋಟುಗಳಲ್ಲಿ ನಡುಗಡ್ಡೆಗೆ ತೆರಳುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಲೈಫ್ ಜಾಕೇಟ್ ವ್ಯವಸ್ಥೆ ಇಲ್ಲದೇ ಯಾರೂ ಸಹ ಬೋಟುಗಳಲ್ಲಿ ತೆರಳುವಂತಿಲ್ಲ ನಿಗದಿತ ಪ್ರಮಾಣದಲ್ಲಿ ಲೈಫ್ ಜಾಕೇಟ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವರ ದರ್ಶನಕ್ಕೆ ತೆರಳುವವರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿರಬೇಕು, 60 ವರ್ಷ ಮೇಲ್ಪಟ್ಟವರು ಮತ್ತು 15 ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ ತೆರಳಲು ಅವಕಾಶ ಇಲ್ಲ, ಆರೋಗ್ಯ ಇಲಾಖೆಯ ಎರಡು ತಂಡಗಳು ನಡುಗಡ್ಡೆಗೆ ತೆರಳುವವರ ದೇಹದ ಉಷ್ಣಾಂಶ ಮತ್ತು ಆಕ್ಸಿಜನ್ ಪರಿಶೀಲನೆ ನಡೆಸಬೇಕು ಎಂದು ತಾಲೂಕು ದಂಡಾಧಿಕಾರಿಗಳು ಸೂಚಿಸಿದರು.
ಅಂಕೋಲಾ ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ ಮಾತನಾಡಿ ಕುಕ್ಕುಡ ದ್ವೀಪ ಪ್ರದೇಶ ಅಪಾಯಕಾರಿ ಆಗಿರುವುದರಿಂದ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಯಾವುದೇ ಕಾರಣಕ್ಕೂ ಬೋಟಿನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಸಂಚರಿಸಲು ಅವಕಾಶ ಇಲ್ಲ ನಡುಗಡ್ಡೆ ಪ್ರದೇಶದಲ್ಲಿ ಕಾಲು ಜಾರದಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಪಿ.ವೈ.ಸಾವಂತ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ,ಕರಾವಳಿ ಕಾವಲು ಪಡೆ ನಿರೀಕ್ಷಕ ನಿಶ್ಚಲ್ ಕುಮಾರ್, ತಾಲೂಕು ವೈದ್ಯಾಧಿಕಾರಿ ನಿತಿನ್ ಹೊಸ್ಮೇಳಕರ, ಅಗ್ನಿಶಾಮಕ ದಳದ ಅಧಿಕಾರಿ ಉಮೇಶ ನಾಯ್ಕ, ಮೀನುಗಾರ ಮುಖಂಡರುಗಳಾದ ಗಣಪತಿ ಬಾನಾವಳಿಕರ, ಪ್ರಮೋದ ಬಾನಾವಳಿಕರ, ಶ್ರೀಕಾಂತ ದುರ್ಗೇಕರ್, ಕೃಷ್ಣಾ ಬಾನಾವಳಿಕರ, ದೇವರ ಪೂಜಾರಿ ಮಂಜುನಾಥ ದೇವು ಗೌಡ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!