ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ-ಕಪಿಲ-ಸ್ಫಟಿಕ ನದಿಗಳ ಪವಿತ್ರ ಸಂಗಮ ಸ್ಥಳವಾದ ಮೈಸೂರು ಜಿಲ್ಲೆಯ ತಿ.ನರಸೀಪುರದ ತಿರುಮಕೂಡಲಿನಲ್ಲಿ ಕುಂಭಮೇಳ ಸೋಮವಾರದಿಂದ ಆರಂಭಗೊಂಡಿದ್ದು, 2ನೇ ದಿನವಾದ ಮಂಗಳವಾರ ಕಾವೇರಿ ಆರತಿ ಅದ್ಧೂರಿಯಾಗಿ ನೆರವೇರಿತು.
ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಹರಿದು ಬಂದಿದ್ದ ಭಕ್ತ ಸಾಗರವು ‘ಕಾವೇರಿ ಆರತಿ’ಯ ಬೆಳಗನ್ನು ಕಣ್ತುಂಬಿಕೊಂಡಿತು. ಕುಂಭಮೇಳದ ಎರಡನೇ ದಿನವಾದ ಮಂಗಳವಾರ, ಅಗಸ್ತ್ಯೇಶ್ವರ ಸ್ವಾಮಿ ದೇಗುಲದ ಸ್ನಾನಘಟ್ಟದಲ್ಲಿ ಅರ್ಚಕರು ಬೆಳಗಿದ ದೀಪಗಳು ಕಾವೇರಿ, ಕಪಿಲೆ, ಸ್ಪಟಿಕ ನದಿಗಳ ಸಂಗಮದಲ್ಲಿ ಕಂಗೊಳಿಸಿದವು.
ಸಂಗಮದ ಬಳಿ ನೆರಿದಿದ್ದ ಭಕ್ತರು ಜೀವನದಿಗಳಾದ ‘ಕಾವೇರಿ’, ‘ಕಪಿಲೆ’ಗೆ ಜಯಕಾರ ಹಾಕಿದರು. ಸ್ವರ್ಗಸದೃಶ ವಾತಾವರಣ ನೋಡಿದವರ ಎದೆಯಲ್ಲಿ ಭಕ್ತಿರಸವು ಹರಿಯಿತು. ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಭತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು. ನೋಡುತ್ತಿದ್ದ ಭಕ್ತರು, ಕೈ ಮುಗಿದರು. ‘ಕಾಲಭೈರವ’, ‘ರುದ್ರ’ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು.
ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಟಿ. ನರಸೀಪುರ ತಾಲ್ಲೂಕಿನ ಗುಂಜಾನರಸಿಂಹ ದೇಗುಲದ ಬಳಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಗಂಗಾಪೂಜೆ, ಕಾವೇರಿ ದೀಪಾರತಿ ನೆರವೇರಿಸಿದರು.