ದಿಗಂತ ವರದಿ, ಕುಂದಾಪುರ:
ರಕ್ಷಿತ್ ಬೆಳಪು
ಉಡುಪಿ ಜಿಲ್ಲೆಯ ಎರಡು ಮುಖ್ಯ ತಾಲೂಕುಗಳ ಜನರ ಬಹುಕಾಲದ ಕೂಗೊಂದು ಇನ್ನೂ ಈಡೇರಿಲ್ಲ. ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಅತಿ ಮುಖ್ಯವಾಗಿ ಆವಶ್ಯಕವಾಗಿರುವ ಆರ್.ಟಿ.ಒ. ಕಚೇರಿಯನ್ನು ಕುಂದಾಪುರದಲ್ಲಿ ಪ್ರಾರಂಭಿಸಬೇಕೆಂಬ ಜನತೆಯ ಅಪೇಕ್ಷೆ ಶೀಘ್ರವೇ ಕಾರ್ಯಗತವಾಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಮಣಿಪಾಲ-ಬೈಂದೂರಿಗೆ 70 ಕಿ.ಮೀ. ದೂರ
ಜಿಲ್ಲಾ ಕೇಂದ್ರ ಉಡುಪಿಯ ಮಣಿಪಾಲದ ರಜತ್ರಾದಿ ಬಳಿ ಆರ್.ಟಿ.ಒ. ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ದೂರದ ಬೈಂದೂರು, ಕೊಲ್ಲೂರು, ವಂಡ್ಸೆ, ಜಡ್ಕಲ್, ಹಾಲ್ಕಲ್, ಕುಂದಾಪುರ ಸೇರಿದಂತೆ ಈ ಭಾಗದ ಜನರು ಬರೋಬ್ಬರಿ 80ರಿಂದ 100 ಕಿ.ಮೀ. ಕ್ರಮಿಸಿ ವಾಹನ ನೋಂದಣಿ, ಚಾಲನ ಪರವಾನಿಗೆ ಮಾಡಿಸಲು ಮಣಿಪಾಲಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಖಾಸಗಿ ವಾಹನ ಇಲ್ಲದವರು ಬಸ್ ನಲ್ಲಿ ಉಡುಪಿಗೆ ಅಲ್ಲಿಂದ ಮಣಿಪಾಲಕ್ಕೆ ಬಸ್ ನಲ್ಲಿ ತೆರಳಿ ರಿಕ್ಷಾದಲ್ಲಿ ಆರ್.ಟಿ.ಒ. ಕಚೇರಿಗೆ ತೆರಳಬೇಕು. ಅಥವಾ ಉಡುಪಿಯಿಂದ ನೇರವಾಗಿ ರಜತ್ರಾದಿ ತೆರಳುವ ಬಸ್ ಗಾಗಿ ಕಾಯಬೇಕು. ಎರಡು ಬಸ್ಸು ಹತ್ತಿ ಇಳಿದು ದೂರದಿಂದ ಪ್ರಯಾಣಿಸಿ ಇಲ್ಲಿಗೆ ಬಂದು ಒಂದು ಇಡಿ ದಿನ ಕಾಯುವ ಸ್ಥಿತಿ ಈ ಎರಡು ತಾಲೂಕಿನ ಜನತೆಯದ್ದು.
2011ರಿಂದ ಹೋರಾಟ ನಡೆಸುತ್ತಿರುವ ಶಾಸಕರು
ಅವಿಭಜಿತ ಕುಂದಾಪುರ ಮತ್ತು ಬೈಂದೂರು ತಾಲೂಕು ವಿಂಗಡನೆಯಾಗುವ ಮೊದಲೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಈ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದರು. ನಂತರ ಕುಂದಾಪುರ ಹಾಗೂ ಬೈಂದೂರು ತಾಲೂಕು ವಿಂಗಡನೆ ಆದ ನಂತರ ಹಾಲಾಡಿ ಅವರೊಂದಿಗೆ ಸುಕುಮಾರ್ ಶೆಟ್ಟಿಯವರು ಧ್ವನಿಗೂಡಿಸಿದ್ದರು. ಕಳೆದ ಬಾರಿ ಶಾಸಕ ಸುಕುಮಾರ್ ಶೆಟ್ಟಿ ಅವರು ವಿಧಾನಸಭೆಯಲ್ಲಿ ಈ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದರು.
ಕಾರ್ಯಗತವಾಗಬೇಕಿದೆ ಶಾಶ್ವತ ಕಚೇರಿಯ ಪ್ರಸ್ತಾಪ
ಮುಖ್ಯಮಂತ್ರಿಗಳು, ಸಾರಿಗೆ ಸಚಿವರ ಜೊತೆ ಶಾಸಕ ಸುಕುಮಾರ್ ಶೆಟ್ಟಿ ಅವರು ಚರ್ಚಿಸಿದ್ದು, ಪಂ. ಚುನಾವಣೆಯ ನಂತರ 2 ತಾಲೂಕಿನ ಜನರಿಗೆ ಸನಿಹವಾಗಿರುವ ಕುಂದಾಪುರದಲ್ಲಿ ತಾತ್ಕಾಲಿಕ ಆರ್ಟಿಒ ಕಚೇರಿಯನ್ನು ವಾರದಲ್ಲಿ 1 ದಿನ ಕಾರ್ಯ ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಂತರದ ದಿನಗಳಲ್ಲಿ ಆರ್ಥಿಕ ವಿಭಾಗದೊಂದಿಗೆ ಚರ್ಚಿಸಿ ಶಾಶ್ವತ ಕಚೇರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗು ವುದೆಂದು ಭರವಸೆ ನೀಡಿದ್ದರೂ ಅದು ಇನ್ನೂ ಕಾರ್ಯಗತವಾಗಿಲ್ಲ.
ವಾರದಲ್ಲಿ ಒಂದು ದಿನ ತಾತ್ಕಾಲಿಕ ಕಚೇರಿ ಸಕ್ರಿಯ
ವಾರದಲ್ಲಿ 1 ದಿನ ಕುಂದಾಪುರದಲ್ಲಿ ಆರ್ಟಿಒ ಕಚೇರಿ ಕಾರ್ಯ ನಿರ್ವಹಿ ಸುತ್ತಿದೆ. ಆದರೆ ಉಡುಪಿ ಆರ್.ಟಿ.ಒ. ಕಚೇರಿಯಲ್ಲಿ ಕುಂದಾಪುರ ಬೈಂದೂರು ಭಾಗದ ವಾಹನಗಳು ದಿನವೊಂದರಲ್ಲಿ 30ಕ್ಕೂ ಹೆಚ್ಚು ಬೈಕ್ಗಳು 10 ಕ್ಕೂ ಹೆಚ್ಚು ಕಾರುಗಳು ನೋಂದಾವಣಿಯಾಗುತ್ತಿದೆ. ಇನ್ನು ಚಲನಾ ಪರವಾನಿಗೆ ಪಡೆಯಲು 100ಕ್ಕೂ ಹೆಚ್ಚು ಜನ ಕುಂದಾಪುರ ಬೈಂದೂರು ಭಾಗದಿಂದ ಬರುತ್ತಾರೆ. ಆದರೆ ಯಾವ ಯಾವ ತಾಲೂಕಿನಿಂದ ಎಷ್ಟು ವಾಹನ, ಎಷ್ಟು ಜನ ಬರುತ್ತಾರೆ ಎಂಬ ನಿಖರ ಮಾಹಿತಿ ಉಡುಪಿ ಆರ್.ಟಿ.ಒ. ಕಚೇರಿಯಲ್ಲಿಲ್ಲ.
ಇಲ್ಲೂ ಸಿಬ್ಬಂದಿಯ ಕೊರತೆ
ಉಡುಪಿಯಲ್ಲಿರುವ ಆರ್ಟಿಒ ಕಚೇರಿಗೇ ಸಿಬ್ಬಂದಿಗಳ ಕೊರತೆಯಿದೆ. ಇನ್ನು ಕುಂದಾಪುರದಲ್ಲಿ ಆರ್.ಟಿ.ಓ ಕಚೇರಿಯಾದರೆ ಸಿಬ್ಬಂದಿಯನ್ನು ಎಲ್ಲಿಂದ ತರುತ್ತಾರಂತೆ ಎಂದು ಆರ್.ಟಿ.ಓ ಕಚೇರಿಯ ಸಿಬ್ಬಂದಿಯೊಬ್ಬರು ವ್ಯಂಗ್ಯ ವಾಡಿದರು.