Thursday, August 11, 2022

Latest Posts

ಸಮಸ್ಯೆಗಳ ಆಗರ ಕುಂದಾಪುರ ರೈಲು ನಿಲ್ದಾಣ: ಸಟ್ವಾಡಿ ಜಂಕ್ಷನ್‌ನಿಂದ ನಿಲ್ದಾಣ ಸಂಪರ್ಕಿಸುವ ರಸ್ತೆ ಅಪೂರ್ಣ

ಹೊಸ ದಿಗಂತ ವರದಿ ಕುಂದಾಪುರ:

  • ರಕ್ಷಿತ್ ಬೆಳಪು

ಸಟ್ವಾಡಿ ಜಂಕ್ಷನ್‌ನಿಂದ ಕುಂದಾಪುರ ರೈಲ್ವೇ ನಿಲ್ದಾಣ ಸಂಪರ್ಕಿಸುವ ರಸ್ತೆ ಅಸಮರ್ಪಕ ವಾಗಿದೆ ಎಂದು ಹಿಂದೊಮ್ಮೆ ವಿಸ್ಕೃತ ವರದಿ ಯನ್ನು ‘ಹೊಸದಿಗಂತ’ ಪ್ರಕಟಿಸಿತ್ತು. ಅನಂತರ ಎಚ್ಚೆತ್ತುಕೊಂಡಿದ್ದ ರೈಲ್ವೇ ಅಧಿಕಾರಿಗಳು ಸಟ್ವಾಡಿ ಜಂಕ್ಷನ್‌ನಿಂದ ರೈಲ್ವೇ ನಿಲ್ದಾಣವನ್ನು ಸಂಪರ್ಕಿಸುವ ಮೊದಲ 500 ಮೀ. ಉದ್ದಕ್ಕೆ ಡಾಂಬರು ಕಾಮಗಾರಿ ನಡೆಸಿದ್ದಾರೆ. ಆದರೆ ರೈಲ್ವೇ ನಿಲ್ದಾಣದಲ್ಲಿ ಅಗತ್ಯವಾಗಿ ಬೇಕಿರುವ ಅನೇಕ ಅಭಿವೃದ್ಧಿ ಕಾರ್ಯಗಳು ಆಗದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ರಿರ್ಸವೇಶನ್ ಸಿಸ್ಟಮ್ ಇಲ್ಲ!
ರೈಲ್ವೇ ನಿಲ್ದಾಣದ ಪ್ರಾರಂಭದ ವೇಳೆ ಜನರು ಪಿಆರ್‌ಎಸ್ ಸೇವೆಯನ್ನು ನಗರದ ಅಂಚೆ ಕಚೇರಿಗೆ ವರ್ಗಾಯಿಸಿಕೊಂಡಿದ್ದರು. ರೈಲ್ವೇ ನಿಲ್ದಾಣ ಒಳಭಾಗ ದಲ್ಲಿರುವುದರಿಂದ ಜನರ ಅನುಕೂಲಕ್ಕಾಗಿ ಈ ರೀತಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಈ ಭಾಗದ ಜನತೆಗೆ ಅಂಚೆ ಕಚೇರಿಯಲ್ಲಿ ರೈಲ್ವೇ ಟಿಕೆಟ್ ರಿರ್ಸವೇಶನ್ ಮಾಡುವುದು ತೀರ ತಲೆ ನೋವಾಗಿದೆ.

ಅಂಚೆ ಕಚೇರಿಯಲ್ಲಿ ಸೇವೆಯ ಕೊರತೆ
ಅಂಚೆ ಇಲಾಖೆಯವರು ತಮ್ಮ ಇಲಾಖೆಗೆ ಸೇರಿದ ಕೆಲಸದೊಂದಿಗೆ ರೈಲ್ವೇ ಇಲಾಖೆಯ ಸೇವೆಯನ್ನು ನೀಡುವುದು ಕಷ್ಟ. ರೈಲ್ವೇಯ ಬಗ್ಗೆ ಜ್ಞಾನದ ಕೊರತೆ ಇದ್ದು, ಸರಕಾರಿ ರಜಾ ದಿನ, ಭಾನುವಾರ ಹಾಗೂ ಮಧ್ಯಾಹ್ನದ ಬಳಿಕ ಇಲ್ಲಿ ಸೇವೆ ಲಭ್ಯ ಇರುವುದಿಲ್ಲ.

ಹೈ ಮಾಸ್ಕ್ ದೀಪಕ್ಕೆ ಬೇಡಿಕೆ
ರೈಲ್ವೇ ಹಿತರಕ್ಷಣಾ ಸಮಿತಿಯವರು ಸುಮಾರು ಹನ್ನೆರಡು ಬೀದಿ ದೀಪಗಳನ್ನು ಈ ಹಿಂದೆ ಕೊಡುಗೆ ಯಾಗಿ ನೀಡಿದ್ದರು. ಇವತ್ತಿಗೂ ಆ ಬೀದಿ ದೀಪಗಳನ್ನು ಹೊರತುಪಡಿಸಿ ಮತ್ತೆ ಯಾವುದೇ ಬೀದಿದೀಪಗಳು ಸೇರ್ಪಡೆಗೊಂಡಿಲ್ಲ. ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಶಾಶ್ವತವಾಗಿ ಹೈಮಾಸ್ಕ್ ದೀಪವನ್ನು ಅಳವಡಿಸಬೇಕೆಂದು ಸ್ಥಳೀಯರ ಆಗ್ರಹ.

ಹೊಸದಿಗಂತ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳ ತಂಡ!
‘ಹೊಸದಿಗಂತ’ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ೫೦೦ ಮೀ. ರಸ್ತೆಗೆ ಡಾಂಬರ್ ಹಾಕಿದ್ದು, 200 ಮೀ. ಬಾಕಿ ಉಳಿದಿದೆ. ಬಾಕಿ ಕಾಮಗಾರಿ ಶೀಘ್ರದಲ್ಲೇ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಅಭಿವೃದ್ಧಿಯಾಗಿಲ್ಲ
ಕುಂದಾಪುರದಲ್ಲಿ ರೈಲು ಪ್ರಯಾಣಿಕರ ಪ್ರಮಾಣ ಏರಿಕೆಯಾಗಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲು, ಕೊಂಕಣ ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿಯಾಗಿಲ್ಲ. ಕೇರಳದ ನಿಲ್ದಾಣಗಳಿಗೆ ಹೋಲಿಸಿದರೆ ಕರ್ನಾಟಕ ಕರಾವಳಿ ಭಾಗದ ನಿಲ್ದಾಣಗಳ ಅಭಿವೃದ್ಧಿಯಾಗಿಲ್ಲ. ಕೊಂಕಣ ರೈಲ್ವೇ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಲಿ. ಕೋವಿಡ್‌ಬಳಿಕ ಎಲ್ಲಡೆ ಪ್ಯಾಸೆಂಜರ್  ಟ್ರೈನ್ ಆರಂಭಗೊಂಡಿದ್ದು, ಕೊಂಕಣ ರೈಲ್ವೆ ಮಡಗಾಂವ್, ಮಂಗಳೂರು ಪ್ಯಾಸೆಂಜರ್ ಟ್ರೈನ್ ಇನ್ನೂ ಆರಂಭಿಸಿಲ್ಲ. ಆದ್ದರಿಂದ ಕೊಡಲೇ ಪ್ಯಾಸೆಂಜರ್  ಟ್ರೈನ್ ಅನ್ನು ಕೊಂಕಣ ರೈಲ್ವೇ ಆರಂಭಿಸಿ ಕರಾವಳಿ ರೈಲ್ವೇ ಪ್ರಯಾಣಿಕರ ಹಿತಾಸಕ್ತಿ ಕಾಪಾಡಲಿ ಎನ್ನುತ್ತಾರೆ ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಸದಸ್ಯ ವಿವೇಕ್ ನಾಯಕ್.

ಏನಿದೆ ಸಮಸ್ಯೆ-ಬೇಡಿಕೆ?

  • ಎಕ್ಸ್‌ಪ್ರೆಸ್ ಮತ್ತು ದೀರ್ಘ ಪ್ರಯಾಣ ರೈಲುಗಳು ನಿಲ್ಲುವ ನಿಲ್ದಾಣವಾಗಿದ್ದರೂ ಈ ರೈಲು ನಿಲ್ದಾಣದಲ್ಲಿ ಅಗತ್ಯಬೇಕಿರುವ ಅನೇಕ ಅಭಿವೃದ್ಧಿ ಕಾರ್ಯ ನಡೆದೇ ಇಲ್ಲ
  • ರಸ್ತೆಗೆ 500 ಮೀ.ವರೆಗೆ ಮಾತ್ರ ಡಾಂಬರು ಹಾಕಿದ್ದು, 200 ಮೀಟರ್ ಕಾಮಗಾರಿ ಬಾಕಿ ಉಳಿಸಲಾಗಿದೆ.
  • ರೈಲು ಪ್ರಯಾಣಿಕರ ತಲೆನೋವಿಗೆ ಕಾರಣವಾಗಿದೆ ಅಂಚೆ ಕಚೇರಿಯಲ್ಲಿರುವ ರೈಲ್ವೇ ಟಿಕೆಟ್ ರಿರ್ಸವೇಶನ್ ಕೌಂಟರ್
  • ರೈಲ್ವೇ ಹಿತರಕ್ಷಣಾ ಸಮಿತಿಯವರು ನೀಡಿದ 12 ಬೀದಿ ದೀಪ ಮಾತ್ರ ಇಲ್ಲಿದೆ
  • ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಶಾಶ್ವತವಾಗಿ ಹೈಮಾಸ್ಕ್ ದೀಪವನ್ನು ಅಳವಡಿಸಬೇಕೆಂದು ಸ್ಥಳೀಯರ ಆಗ್ರಹ
  • ನಿಲ್ದಾಣ ಬಂದಿಳಿದ ನಂತರ ವಿಶ್ರಾಂತಿ ಪಡೆಯಲು ಇಲ್ಲಿ ಇಲ್ಲ ವಿಶ್ರಾಂತಿ ಗೃಹ
  • ಎಲ್ಲ ವೇಗದೂತ ರೈಲು ನಿಲ್ಲುವ ನಿಲ್ದಾಣವಾಗಿದ್ದರೂ ಕೂಡ ನಿಲ್ದಾಣ ಇರುವುದು ಪಾಳು ಬಿದ್ದ ಕಟ್ಟಡದಲ್ಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss