ಶ್ರದ್ಧಾಭಕ್ತಿಯ ನಡುವೆ ಮೇಳೈಸಿದ ಕುಶಾಲನಗರ ಗಣಪತಿ ರಥೋತ್ಸವ

ಹೊಸದಿಗಂತ ವರದಿ ಕುಶಾಲನಗರ:

ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ, ಆಗಾಗ್ಗೆ ತಂಪೆರೆಯುತ್ತಿದ್ದ ತುಂತುರು ಮಳೆ, ಅಯ್ಯಪ್ಪ ವೃತಧಾರಿಗಳ ಜಯಘೋಷ, ಭಕ್ತರ ಉತ್ಸಾಹದ ಮಧ್ಯೆ ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ ಶನಿವಾರ ಶ್ರದ್ಧಾಭಕ್ತಿಯ ಜೊತೆಗೆ ವಿಜೃಂಭಣೆಯಿಂದ ನಡೆಯಿತು.
ಕೊರೋನಾ ಕಾರಣಕ್ಕೆ ಕಳೆದ 2 ವರ್ಷ ಸರಳವಾಗಿ ಆಚರಿಸಿದ್ದ ಉತ್ಸವ ಈ ಬಾರಿ ಕಳೆಗಟ್ಟಿತ್ತು.

ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಪೂರ್ವಾಹ್ನ 11.30ರ ಸುಮಾರಿಗೆ ರಥಕ್ಕೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ನಂತರ ದೇವಾಲಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿ ದೇವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳ ಜೊತೆಗೆ ದೇವಾಲಯದಿಂದ ಹೊರತಂದು ಭಕ್ತರ ಜಯಘೋಷಗಳ ಮಧ್ಯೆ ರಥದಲ್ಲಿ ಕುಳ್ಳರಿಸಲಾಯಿತು.
ಇದಕ್ಕೂ ಮೊದಲು ಪಕ್ಕದ ಹೆಬ್ಬಾಲೆ ಮತ್ತು ಆವರ್ತಿಯಿಂದ ಬಂದಿದ್ದ ಗೋವುಗಳಿಗೆ ಗೋಪೂಜೆ ನೆರವೇರಿಸಲಾಯಿತು.

ಇದೇ ವೇಳೆ ಅಯ್ಯಪ್ಪ ಮಾಲಾಧಾರಿಗಳು ಗಣಪತಿ ದೇವಾಲಯದ ಎದುರು ರಸ್ತೆಯುದ್ದಕ್ಕೂ ಕರ್ಪೂರ ಹರಡಿ ಬೆಂಕಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಮಾಲಾಧಾರಿಗಳ ಲಯಬದ್ಧ ಭಜನೆ ಈ ಸಂದರ್ಭದಲ್ಲಿ ಗಮನ ಸೆಳೆಯಿತು. ಮತ್ತೊಂದೆಡೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥದ ಮುಂದೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ಅರ್ಚಕರು ತಾಳ್ಮೆಯಿಂದಲೇ ಭಕ್ತರು ತಂದಿದ್ದ ಹಣ್ಣುಕಾಯಿ ಸ್ವೀಕರಿಸಿ, ದೇವರಿಗೆ ಸಮರ್ಪಿಸಿ ಭಕ್ತರಿಗೆ ಹಿಂತಿರುಗಿಸುತ್ತಿದ್ದ ದೃಶ್ಯ ಕಂಡುಬಂತು.

ಮಧ್ಯಾಹ್ನ 1.15ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ್ದ ಭಕ್ತರು ಗಣಪತಿಗೆ ಜಯಘೋಷ ಮೊಳಗಿಸುತ್ತಾ ಉತ್ಸಾಹದಿಂದ ರಥ ಎಳೆದು ಪುನೀತರಾದರು. ಹರಕೆ ಹೊತ್ತಿದ್ದ ಭಕ್ತರು ರಥ ಆಗಮಿಸುವ ವೇಳೆ ರಸ್ತೆಯಲ್ಲಿ ಸಾವಿರಾರು ಈಡುಕಾಯಿ ಒಡೆದು ಭಕ್ತಿ ಪ್ರದರ್ಶಿಸಿದರು. ದೇವಾಲಯ ವ್ಯಾಪ್ತಿಯಲ್ಲಿ ಬಾಳೆಹಣ್ಣು, ಜವನ ಮಾರಾಟ, ಪೈಪೋಟಿಗೆ ಬಿದ್ದಂತೆ ರಥಕ್ಕೆ ಜವನ ಎಸೆಯುವ ದೃಶ್ಯ ಸಾಮಾನ್ಯವಾಗಿತ್ತು.

ಗಣಪತಿ ದೇವಾಲಯದ ಎದುರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಥಬೀದಿಗಾಗಿ ಆಂಜನೇಯ ದೇವಾಲಯದ ತನಕ ರಥವನ್ನು ಎಳೆಯಲಾಯಿತು. ಇದಕ್ಕೂ ಮೊದಲು ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥಪೂಜೆ ಹಾಗೂ ರಥ ಬಲಿ ಕಾರ್ಯಕ್ರಮಗಳು ನಡೆದವು.
ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತ್‍ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರುಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!