Sunday, August 14, 2022

Latest Posts

ಕಾಫಿಗೆ ಕಾವಲು ಕಾಯುತ್ತಿದ್ದ ಕಾರ್ಮಿಕ ಕಾಡಾನೆ ದಾಳಿಗೆ ಬಲಿ

ದಿಗಂತ ವರದಿ ಮಡಿಕೇರಿ:

ಕಾಫಿ ಕಣದಲ್ಲಿ ಕಾವಲು ಕಾಯುತ್ತಿದ್ದ ಕಾರ್ಮಿಕನೊಬ್ಬ ಕಾಡಾನೆ ದಾಳಿಗೆ ಬಲಿಯಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರದ ಬಿಬಿಟಿಸಿ ಬೀಟಿಕಾಡು ತೋಟದಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ಮೃತನನ್ನು ತೋಟದ ಕಾರ್ಮಿಕ ಆನಂದಪುರ ನಿವಾಸಿ ಸಂದೀಪ್ (22) ಎಂದು ಗುರುತಿಸಲಾಗಿದೆ.
ಕಾಫಿ ಪಲ್ಪಿಂಗ್ ಕಣದಲ್ಲಿ ಕಾವಲುಗಾರನಾಗಿದ್ದ ಸಂದೀಪ್ ನಿದ್ದೆಯಲ್ಲಿದ್ದ ಸಂದರ್ಭ ಕಾಡಾನೆ ಹಠಾತ್ತನೆ ದಾಳಿ ಮಾಡಿದ್ದು, ಆನೆಯ ತುಳಿತಕ್ಕೆ ಸಂದೀಪ್ ತಲೆ ಛಿದ್ರಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss