ದಿಗಂತ ವರದಿ ಮಂಗಳೂರು:
ಮಂಗಳೂರು ನಗರ ಸೇರಿದಂತೆ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಶದಲ್ಲಿದ್ದ ಇಬ್ಬರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಷರತ್ತಿನೊಂದಿಗೆ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಸೀಫ್ ಎಂಬ ಆರೋಪಿಗಳು ವಾರದ ಹಿಂದೆ ಎಮ್ಮೆಕೆರೆ ಬಬ್ಬುಸ್ವಾಮಿ- ಕೊರಗಜ್ಜನ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಲು ಬಂದಿದ್ದ ಸಂದರ್ಭ ಪೊಲೀಸರ ವಶವಾಗಿದ್ದರು.
ಬಳಿಕ ವಿವಿಧೆಡೆ ನಡೆಸಿದ ಕೃತ್ಯದ ಬಗ್ಗೆ ತೀವ್ರ ತನಿಖೆ ನಡೆಸಲಾಗಿತ್ತು.
ತನಿಖೆ ಸಂದರ್ಭ ಆರೋಪಿಗಳು ಮಾಡಿರುವ ಕೃತ್ಯಕ್ಕೆ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ಲಭಿಸಿಲ್ಲ. ಅಲ್ಲದೆ ಅವರ ಮೊಬೈಲ್ ಲೊಕೇಶನ್, ಸಿಕ್ಕಿರುವ ಚೀಟಿಯಲ್ಲಿರುವ ಕೈ ಬರಹಗಳು ಕೂಡಾ ಮ್ಯಾಚ್ ಆಗುತ್ತಿಲ್ಲ. ಈ ಕಾರಣದಿಂದ ತನಿಖೆಗೆ ಇನ್ನಷ್ಟು ಕಾಲಾವಕಾಶ ಬೇಕಿರುವ ಕಾರಣ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಸೀಫ್ ಎಂಬವರಿಂದ ಭದ್ರತಾ ಬಾಂಡ್ ಪಡೆದು ಠಾಣೆಯಿಂದ ಕಳುಹಿಸಿಕೊಡಲಾಗಿದೆ. ಯಾವುದೇ ರೀತಿಯ ಹೆಚ್ಚುವರಿ ತನಿಖೆಗೆ ಕರೆದಾಗ ಠಾಣೆಗೆ ಹಾಜರಾಗಬೇಕು ಎಂದು ಆರೋಪಿಗಳಿಗೆ ಷರತ್ತು ವಿಧಿಸಲಾಗಿದೆ. ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿದ ತಕ್ಷಣ ಆರೋಪಿಗಳನ್ನು ಬಂಧಿಸಲಾಗುತ್ತದೆ. ಅಲ್ಲಿಯವರೆಗೆ ಅವರು ಶಂಕಿತ ಆರೋಪಿಗಳು ಆಗಿರುತ್ತಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.