ಹೊಸದಿಗಂತ ವರದಿ, ಮಂಗಳೂರು:
ನಗರದ ಖಾಸಗಿ ಬಸ್ನಲ್ಲಿ ಮಹಿಳೆಯೊಬ್ಬರು ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಸರಕಾರಿ ಬಸ್ನಲ್ಲಿ ಮಹಿಳಾ ನಿರ್ವಾಹಕರಿದ್ದಾರೆ. ರಿಕ್ಷಾ ಓಡಿಸುವ ಮಹಿಳೆಯರೂ ಕಾಣಸಿಗುತ್ತಾರೆ. ಆದರೆ, ಮಂಗಳೂರಿನಲ್ಲಿ ಖಾಸಗಿ ಬಸ್ನಲ್ಲಿ ಮಹಿಳೆಯರೊಬ್ಬರು ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.
ದುರಂತದಿಂದ ಅಧೀರಳಾಗಲಿಲ್ಲ:
ಕೌಟುಂಬಿಕ ಸಮಸ್ಯೆ ನಡುವೆ ಹೊಟ್ಟೆ ಹೊರೆಯುವುದಕ್ಕಾಗಿ ದೂರದ ಬೆಳಗಾವಿಯಿಂದ ಕರಾವಳಿಗೆ ಆಗಮಿಸಿದ ಈ ಮಹಿಳೆ ಈಗ ಖಾಸಗಿ ಬಸ್ ನಿರ್ವಾಹಕಿಯಾಗಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕೌಟುಂಬಿಕವಾಗಿ ಎದುರಾದ ಸಾಲು ಸಾಲು ದುರಂತದಿಂದ ಅಧೀರಳಾಗದೆ ಬಸ್ ನಿರ್ವಾಹಕಿಯಾಗಿ ಕೆಲಸ ಮಾಡಿ ದಿಟ್ಟೆ ಎನಿಸಿಕೊಂಡಿದ್ದಾರೆ. ಆಕೆಯ ಹೆಸರು ಅನಿತಾ. ಪ್ರಾಯ 27 ವರ್ಷ. ಬೆಳಗಾವಿ ಜಿಲ್ಲೆಯ ಯರಗಟ್ಟಿ ಗ್ರಾಮದ ಈಕೆ ಈಗ ಮಂಗಳೂರು-ಕಾರ್ಕಳ ನಡುವೆ ಓಡಾಡುವ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿದ್ದಾರೆ.
ಬಾಲ್ಯ ವಿವಾಹ ಆಗಿದ್ದರು:
ಅನಿತಾ ಅವರು ಮೂರನೇ ತರಗತಿಯಲ್ಲಿದ್ದಾಗ ಆಕೆಯ ಕುಟುಂಬಸ್ಥರು ಅವರಿಗೆ ಬಾಲ್ಯವಿವಾಹ ಮಾಡಿಸಿದ್ದರು. ಮದುವೆ ಬಳಿಕ ತನ್ನ ಶಿಕ್ಷಣ ಮುಂದುವರೆಸಿದ ಆಕೆ ಶಾಲಾ ರಜಾದಿನಗಳಲ್ಲಿ ತನ್ನ ಗಂಡನ ಮನೆಗೆ ತೆರಳುತ್ತಿದ್ದರು. 10 ನೇ ತರಗತಿಯಲ್ಲಿದ್ದಾಗ ಗರ್ಭಿಣಿಯಾದ ಕಾರಣ ಶಿಕ್ಷಣವನ್ನು ಮೊಟಕುಗೊಳಿಸಬೇಕಾಯಿತು. ತಾಯಿಯಾದ ಬಳಿಕ ಮತ್ತೆ ಶಿಕ್ಷಣ ಪಡೆದ ಅವರು ಪಿಯುಸಿ ಪೂರ್ಣಗೊಳಿಸಿದರು. ಈ ನಡುವೆ ರಸ್ತೆ ಅಪಘಾತದಲ್ಲಿ ಅನಿತಾ ತನ್ನ ಗಂಡನನ್ನು ಕಳೆದುಕೊಂಡರು. ಆಗ ಆಕೆಯ ಮಗಳಿಗೆ ಕೇವಲ ಮೂರು ವರ್ಷ.
ಅನಿತಾ ತುಂಬಾ ಚಿಕ್ಕವಳಿದ್ದಾಗ ಆಕೆಯ ತಂದೆ ತೀರಿಕೊಂಡಿದ್ದರು. ಗಂಡನ ಮರಣದ ನಂತರ, ಉದ್ಯೋಗ ಹುಡುಕುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಹಾಗೆ ಉದ್ಯೋಗ ಅರಸುತ್ತಾ ಆಗಮಿಸಿದ್ದು ಕುಂದಾಪುರಕ್ಕೆ.
‘ಕುಂದಾಪುರಕ್ಕೆ ಆಗಮಿಸಿದ ನಂತರ, ನನ್ನ ಸ್ನೇಹಿತರೊಬ್ಬರು ದುರ್ಗಾಂಬಾ ಮೋಟಾರ್ಸ್ನಲ್ಲಿ ಕಂಡಕ್ಟರ್ ಕೆಲಸ ಪಡೆಯಲು ನನಗೆ ಸಹಾಯ ಮಾಡಿದರು. ನಾನು ಕೆಲಸಕ್ಕೆ ಸೇರಿದೆ. ಕಳೆದ ಆರು ವರ್ಷಗಳಿಂದ ನಾನು ಈ ಕ್ಷೇತ್ರದಲ್ಲಿದ್ದೇನೆ. ನನ್ನ ಪಿಯು ಮುಗಿದ ನಂತರ, ನಾನು ಕುಂದಾಪುರಕ್ಕೆ ಕೆಲಸ ಬಂದೆ’ ಎಂದು ಅನಿತಾ ನೆನಪಿಸಿಕೊಳ್ಳುತ್ತಾರೆ.
ಆದರೆ ತಾಯಿ ಕೂಡ ತೀರಿಕೊಂಡಾಗ ಮತ್ತೊಂದು ದುರಂತ ಅವರಿಗೆ ಎದುರಾಯಿತು. ಮಗಳನ್ನು ಪ್ರಸ್ತುತ ಆಕೆಯ ದೊಡ್ಡಪ್ಪ ಮತ್ತು ದೊಡ್ಡಮ್ಮ ನೋಡಿಕೊಳ್ಳುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ವಿಧಿಸಲಾದ ಲಾಕ್ಡೌನ್ ಅನಿತಾ ಅವರ ಮೇಲೂ ಪರಿಣಾಮ ಬೀರಿತು. ‘ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ಇದ್ದಾಗ, ನನಗೆ ಕೆಲಸವಿಲ್ಲ, ಹಾಗಾಗಿ ನಾನು ನನ್ನ ಊರಿಗೆ ಮರಳಿದ್ದೆ, ಲಾಕ್ಡೌನ್ ಸಡಿಲಿಕೆಯಾದಾಗ ಮತ್ತೆ ಮಂಗಳೂರಿಗೆ ಬಂದೆ. ಪ್ರಸ್ತುತ, ನಾನು ಪದ್ಮಾಂಬಿಕಾ ಮೋಟಾರ್ಸ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದಕ್ಕೂ ಮೊದಲು ನಾನು ಎಕೆಎಂಎಸ್, ಭಾರತಿ ಮೋಟಾರ್ಸ್ನಲ್ಲಿಯೂ ಕೆಲಸ ಮಾಡಿದ್ದೇನೆ.
ಆರಂಭದಲ್ಲಿ ಕುಂದಾಪುರದಿಂದ ಕೊಲ್ಲೂರಿಗೆ, ನಂತರ ಉಡುಪಿಯಿಂದ ಕೊಲ್ಲೂರಿಗೆ, ಬಳಿಕ ಉಡುಪಿ- ಮಂಗಳೂರಿಗೆ. ಈಗ, ಕಳೆದ ಎರಡು ವರ್ಷಗಳಿಂದ ಮಂಗಳೂರಿನಿಂದ ಕಾರ್ಕಳಕ್ಕೆ ತೆರಳುವ ಬಸ್ನಲ್ಲಿ ಕಂಡಕ್ಟರ್ ಆಗಿದ್ದೇನೆ’ ಎಂದು ತನ್ನ ಸವಾಲಿನ ಹಾದಿ ವಿವರಿಸಿದರು.
ಏಕೈಕ ಮಹಿಳೆ ಕಂಡಕ್ಟರ್!
ನಾನು ಮಂಗಳೂರಿನ ಖಾಸಗಿ ಬಸ್ನಲ್ಲಿರುವ ಏಕೈಕ ಮಹಿಳೆ ಕಂಡಕ್ಟರ್. ಈ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಹಳ್ಳಿಯಿಂದ ಬಂದವಳು. ಮಹಿಳೆಯರು ಭರವಸೆಯನ್ನು ಕಳೆದುಕೊಳ್ಳಬಾರದು. ಇತರರನ್ನು ಅವಲಂಬಿಸದೆ ನಾವು ನಮಗಾಗಿ ಸಂಪಾದಿಸಬೇಕು ಎಂಬುದು ಅನಿತಾ ಅಭಿಪ್ರಾಯ.
ಇಲ್ಲಿನ ಜನರು ತುಂಬಾ ಒಳ್ಳೆಯವರು…
‘ಎಲ್ಲ ಬಸ್ ಕಂಪೆನಿಗಳು ನನಗೆ ಉತ್ತಮವಾಗಿ ಬೆಂಬಲ ನೀಡಿವೆ. ಆದರೆ ಎಕೆಎಂಎಸ್ ನನಗೆ ಸಾಕಷ್ಟು ಬೆಂಬಲ ನೀಡಿತು. ನಾನು ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ ಕೆಲಸ ನಿರ್ವಹಿಸುತ್ತೇನೆ. ಮಹಿಳೆಯಾಗಿರುವುದರಿಂದ ಬಸ್ನಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ, ವಿವಿಧ ಮನೋಭಾವದ ಜನರು ಪ್ರಯಾಣಿಸುತ್ತಾರೆ. ಕೆಲ ಪ್ರಯಾಣಿಕರು ಒರಟು ಪದಗಳನ್ನು ಸಹ ಬಳಸುತ್ತಾರೆ, ಮತ್ತು ನಾವು ಅವುಗಳನ್ನು ನಿರ್ವಹಿಸಬೇಕಾಗಿದೆ. ಮಂಗಳೂರಿನಲ್ಲಿ ಜನರು ನಿಜವಾಗಿಯೂ ಒಳ್ಳೆಯವರು’ ಎಂದು ಅನಿತಾ ಹೇಳುತ್ತಾರೆ.