ಹಲ್ಲೆ ಆರೋಪ: ಆರ್‌ಜೆಡಿಗೆ ರಾಜೀನಾಮೆ ಘೋಷಿಸಿದ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಕ್ಷದ ಕಾರ್ಯಕರ್ತರನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ತಂದೆಯವರೊಂದಿಗೆ ಇಂದು ಮಾತುಕತೆ ನಡೆಸಿ ಆರ್‌ಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಯಾವಾಗಲೂ ನನ್ನ ತಂದೆಯ ಆದರ್ಶಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ ಮತ್ತು ಪಕ್ಷದ ಕಾರ್ಯಕರ್ತರನ್ನು ಗೌರವಿಸುತ್ತೇನೆ. ನನ್ನ ಮೇಲೆ ಕೇಳಿಬಂದ ಆರೋಪಗಳಿಂದ ನೊಂದಿದ್ದೇನೆ ಎಂದು ತೇಜ್ ಪ್ರತಾಪ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ರಾಬ್ಡಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ತೇಜ್‌ ಪ್ರತಾಪ್‌ ಹಾಗೂ ಆಪ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರ್‌ಜೆಡಿ ಯುವ ಘಟಕದ ಪಾಟ್ನಾ ಪಟ್ಟಣ ಘಟಕದ ಅಧ್ಯಕ್ಷ ರಾಮರಾಜ್ ಯಾದವ್ ಅವರು ಆರೋಪಿಸಿದ್ದರು.
ರಾಮರಾಜ್ ಅವರೊಂದಿಗೆ ತೇಜ್ ಅನುಚಿತವಾಗಿ ವರ್ತಿಸಿದ ಬಗ್ಗೆ ಅವರ ಕಿರಿಯ ಸಹೋದರ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರಿಗೂ ದೂರು ನೀಡಲಾಗಿತ್ತು. ಆದರೆ ತೇಜ್ ಪ್ರತಾಪ್ ಅವರು ರಾಮರಾಜ್ ತನ್ನ ವಿರುದ್ಧ ಹೊರಿಸಿರುವ ಆರೋಪಗಳನ್ನು ನಿರಾಕರಿಸಿದ್ದರು. “ಜಗದಾನಂದ್ ಸಿಂಗ್, ಸುನಿಲ್ ಸಿಂಗ್ (ಎಂಎಲ್‌ಸಿ) ಮತ್ತು ಸಂಜಯ್ ಯಾದವ್ (ತೇಜಸ್ವಿ ಅವರ ಸಲಹೆಗಾರ) ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!