ಕಲಬುರಗಿಯನ್ನು ಕೈಗಾರಿಕೆ ಹಬ್ ಮಾಡಲು 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ಹೊಸದಿಗಂತ ದಿಜಿಟಲ್‌ ಡೆಸ್ಕ್‌, ಕಲಬುರಗಿ
ಜಿಲ್ಲೆಯಲ್ಲಿ ಕೈಗಾರಿಕೆಗಳು ಒಂದೇ ಕಡೆ ಇರುವಂತೆ ಮಾಡಿ ಕೈಗಾರಿಕೆ ಹಬ್ ಅನ್ನಾಗಿ ಮಾಡಲು ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ರವಿವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ಮಾಡಿ, 11 ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕಾಗಿ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಜಾರಿಗೊಳಿಸಲಾಗಿದೆ. ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ದೇಶದಲ್ಲಿನ ಒಟ್ಟು ಪಾಲಿನಲ್ಲಿ ಶೇ.42 ರಷ್ಟು ಕರ್ನಾಟಕಕ್ಕೆ ಲಭಿಸಿದೆ ಎಂದರು.
ದಾವೋಸ್ ಆರ್ಥಿಕ ಶೃಂಗ ಫಲಪ್ರದವಾಗಿದ್ದು, ಮುಂದಿನ 3-4 ತಿಂಗಳಿನಲ್ಲಿ 1 ಲಕ್ಷ ಕೋಟಿ ರೂ. ರಾಜ್ಯದಲ್ಲಿ ಹೂಡಿಕೆಯಾಗಲಿದೆ. ಇದಲ್ಲದೆ ಬರುವ ನವೆಂಬರ್ 2 ರಿಂದ 4ರ ವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಶ್ವ ಬಂಡವಾಳದಾರರ ಸಮಾವೇಶ ಆಯೋಜಿಸಿದ್ದು, 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ ಹೊಂದಿದ್ದೇವೆ. ಇದಕ್ಕಾಗಿ ಜಪಾನ್, ದಕ್ಷಿಣ ಕೋರಿಯಾ ದೇಶದಲ್ಲಿ ಈಗಾಗಲೇ ರೋಡ್ ಶೋ ಮಾಡಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಕೈಗಾರಿಕೆ ಸ್ನೇಹಿ ವಾತಾವರಣದ ಬಗ್ಗೆ ಪ್ರತಿಷ್ಟಿತ ಕಂಪನಿಗಳಿಗೆ ಮನವರಿಕೆ ಮಾಡಿ ಆಹ್ವಾನ ನೀಡಿದ್ದೇವೆ ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನ ನೀಡಿದ ಮಹಾನ್ ಪುರುಷರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಸಚಿವರು. “ಹರ್ ಘರ್ ತಿರಂಗಾ” ಅಭಿಯಾನವನ್ನು ಯಶಸ್ವಿಗೊಳಿಸಿದಕ್ಕೆ ಜಿಲ್ಲೆಯ ಜನತೆಗೆ ಧನ್ಯವಾದ ಅರ್ಪಿಸಿದರು.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಡಿ.ಬಿ.ಗೆ ದಾಖಲೆ ಪ್ರಮಾಣದಲ್ಲಿ 3,000 ಕೋಟಿ ರೂ. ಅನುದಾನ ನೀಡಲಾಗಿದೆ. ಸೆಪ್ಟೆಂಬರ್ 17 ರಂದು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಿಜೃಂಭಣೆಯಿಂದ “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ” ನಡೆಸಲು ಉದ್ದೇಶಿಸಲಾಗಿದೆ ಎಂದರು.

ಸ್ಪಂದನ ಕಲಬುರಗಿ ಕಾರ್ಯಕ್ರಮಕ್ಕೆ ಮೆಚ್ಚುಗೆ:

ಸಾರ್ವಜನಿಕರ ಕುಂದುಕೊರತೆಗಳನ್ನು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮಕ್ಷಮ ಆಲಿಸುವ, ವಿವಿಧ ಸೌಲಭ್ಯಗಳನ್ನು ವಿತರಿಸುವ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ “ಸ್ಪಂದನ ಕಲಬುರಗಿ” ಎಂಬ ವಿನೂತನ ಕಾರ್ಯಕ್ರಮ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಜಿಲ್ಲೆಯಲ್ಲಿ ಪ್ರಾರಂಭಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಇದನ್ನು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೂ ವಿಸ್ತರಣೆಗೆ ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!