ಜಿಂದಾಲ್ ಕಂಪನಿಗೆ ಜಮೀನು: ಸರ್ಕಾರದ ಕ್ರಮಕ್ಕೆ ಬೊಮ್ಮಾಯಿ ವಿರೋಧ

 ಹೊಸದಿಗಂತ ವರದಿ ,ದಾವಣಗೆರೆ:

ಬಳ್ಳಾರಿ ಜಿಲ್ಲೆಯಲ್ಲಿನ ಅತ್ಯಂತ ಬೆಲೆಬಾಳುವ ಅದಿರುಳ್ಳ 3,677 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ನೀಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಹರಿಹರ ನಗರದ ಶ್ರೀ ರಾಘವೇಂದ್ರ ಮಠದ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ತುಂಗ-ಭದ್ರಾರತಿ ಮಂಟಪದ ಬಳಿ ತುಂಗಭದ್ರೆಗೆ ಬಾಗಿನ ಅರ್ಪಿಸಿ, ಬೃಂದಾವನದಲ್ಲಿ ಸಸಿ ನೆಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ವಿಪಕ್ಷವಾಗಿದ್ದ ಕಾಂಗ್ರೆಸ್ಸಿಗರು ಇದಕ್ಕೆ ತೀವ್ರವಾಗಿ ವಿರೋಧಿಸಿದ್ದರು. ಈಗ ಅದೇ ದರಕ್ಕೆ ಕಾಂಗ್ರೆಸ್ಸಿನವರು ಜಮೀನನ್ನು ಜಿಂದಾಲ್ ಉಕ್ಕು ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಹೇಳುವುದೇ ಒಂದು, ಮಾಡುವುದೇ ಇನ್ನೊಂದು ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷದವರು ಯಾವಾಗಲೂ ಬಂಡವಾಳಶಾಹಿಗಳ ಪರವಾಗಿರುವವರು ಎಂದು ಟೀಕಿಸಿದರು.

ಅಲ್ಲಿ ರಾಹುಲ್ ಗಾಂಧಿಯವರು ಅದಾನಿ, ಅಂಬಾನಿ ವಿರುದ್ಧ ವಾಗ್ದಾಳಿ ಮಾಡುತ್ತಾರೆ. ಅದರೆ, ಇಲ್ಲಿ ಅದೇ ಕಾಂಗ್ರೆಸಿನವರು ಬೆಲೆಬಾಳುವ ಜಮೀನುಗಳಿಗೆ ಮಾರುಕಟ್ಟೆ ಬೆಲೆ ವಿಧಿಸುವ ಬದಲು ಕಡಿಮೆ ಬೆಲೆ ನೀಡುತ್ತಿದ್ದಾರೆ. ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಹೆಚ್ಚಿನ ಬೆಲೆಗೆ ನೀಡುವಮತೆ ಒತ್ತಾಯಿಸಿದ್ದೆವು. ಆದರೂ ಅಧಿಕಾರಿಗಳ ಮಾತಿಗೆ ಇಡೀ ಕ್ಯಾಬಿನೆಟ್ ಮಣಿದಿದೆ. ಸರ್ಕಾರದ ಕೆಲ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಇದರಿಂದ ಬಹಳ ದೊಡ್ಡ ನಷ್ಟವಾಗಿದ್ದು, ಬಹಳ ದೊಡ್ಡ ವ್ಯವಹಾರ ನಡೆದಿದೆ ಎಂಬ ಅನುಮಾನ ಮೂಡುತ್ತದೆ ಎಂದು ಅವರು ನುಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ಮುಚ್ಚಿ ಹಾಕಲೆಂದೇ ಕಾಂಗ್ರೆಸ್ ಸರ್ಕಾರ ಎಸ್.ಐ.ಟಿ ರಚಿಸಿದೆ. 50 ಕೋಟಿ ರೂ. ವಾಪಾಸ್ಸು ಬರುತ್ತೆಂದರೆ ಇವರೇ ಕಳಿಸಿದ್ದ ಹಣ ವಾಪಾಸ್ಸು ಬರುತ್ತದಷ್ಟೇ. ಇದರಲ್ಲಿ ಎಸ್.ಐ.ಟಿ ಪಾತ್ರ ಏನೂ ಇಲ್ಲ, ಎಸ್.ಐ.ಟಿ ಏನನ್ನೂ ಮಾಡಿಲ್ಲ. ಸಂಪೂರ್ಣ ಸಾಕ್ಷಿ ಇದ್ದರೂ ಪ್ರಮುಖ ಅರೋಪಿಗಳ ಹೆಸರನ್ನು ಬಿಟ್ಟಿದ್ದು, ಎಸ್.ಐ.ಟಿ ಸಲ್ಲಿಸಿದ ಚಾರ್ಜ್ ಶೀಟ್ ಸತ್ಯದಿಂದ ಕೂಡಿಲ್ಲ. ಇಡೀ ಪ್ರಕರಣ ಮುಚ್ಚಿ ಹಾಕುವಂತಹ ಚಾರ್ಜ್ ಶೀಟ್ ಇದಾಗಿದೆ. ಇದನ್ನು ನಾವು ಚಾಲೆಂಜ್ ಮಾಡುತ್ತೇವೆ ಎಂದರು.

ಪರ್ಯಾಯವಾಗಿ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ. ಇ.ಡಿ. ಚಾರ್ಜ್ ಶೀಟ್ ನಲ್ಲಿ ತಪ್ಪಿತಸ್ಥರ ಹೆಸರು ಬರುತ್ತದೆ. ಇದರಲ್ಲಿ ಸೇಡಿನ ರಾಜಕಾರಣ ಇಲ್ಲ. ಮೃತ ಅಧಿಕಾರಿಯ ಡೆತ್ ನೋಟ್ ಆಧರಿಸಿ ಇ.ಡಿ ತನಿಖೆ ನಡೆಸುತ್ತಿದೆ. ಆದರೆ ಡೆತ್ ನೋಟ್ ವಿಚಾರ ಬಿಟ್ಟು ಎಸ್.ಐ.ಟಿ ತನಿಖೆ ಮಾಡುತ್ತಿದೆ. ಕಾಂಗ್ರೆಸಿನವರ ಕೈಯಲ್ಲಿ ಅಧಿಕಾರ ಇದೆ, ಏನು ಮಾಡುತ್ತಾರೋ ಮಾಡಲಿ ಎಂದು ಅವರು ಹೇಳಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!