ದಕ್ಷಿಣ ಕನ್ನಡದಲ್ಲಿ ಭೂಕುಸಿತ: ಆತಂಕ ಹುಟ್ಟಿಸಿದ ಗುರುಪುರ ಪರಿಸರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ(169)ಯ  ಗುರುಪುರ ಜಂಕ್ಷನ್‍ ಮತ್ತು ಪೊಳಲಿ ದ್ವಾರದ ಮದ್ಯೆ ಅಣೆಬಳಿಯ  ವನಭೋಜನ ಎಂಬಲ್ಲಿ  ಹೆದ್ದಾರಿಯ ಪಕ್ಕದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಸದ್ಯ ಮಂಗಳೂರು-ಮೂಡಬಿದ್ರೆ ಭಾಗದ ಬಸ್ ಸಹಿತ ಘನ ವಾಹನ ಸಂಚಾರವನ್ನು ಪರ್ಯಾಯ ರಸ್ತೆಗೆ ವರ್ಗಾಯಿಸಲಾಗಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿ ಹೆದ್ದಾರಿಯ ಎರಡು  ತಿರುವುಗಳಲ್ಲಿ ಭಾರೀ  ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು,  ಗುಡ್ಡ ಕುಸಿದ ಜಾಗದಲ್ಲೇ ಭಾರೀ ನೀರಿನ ಝರಿಯೊಂದು ಹರಿಯುತ್ತಿದ್ದು, ಮಣ್ಣು ಕುಸಿತ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ  ಮಳೆ ಹೆಚ್ಚಾಗಿ ಇಲ್ಲಿನ  ಮಣ್ಣು ಕುಸಿಯುತ್ತ ಹೋದಲ್ಲಿ ಹೆದ್ದಾರಿಯೇ ತುಂಡಾಗುವ ಸಾಧ್ಯತೆ ಇದೆ.

ಸತತ ಮಳೆಯಿಂದ ಇಲ್ಲಿ ಹೆಚ್ಚಿನ ಅಪಾಯ ಸಾಧ್ಯತೆ ಇದ್ದು. ಹೆದ್ದಾರಿಯ ಮಧ್ಯಭಾಗದವರೆಗೆ ಒಳಗಿನಿಂದ ಮಣ್ಣು ಸವೆತವಾಗಿದೆ. ಸುರಕ್ಷತೆ ದೃಷ್ಟಿಯಿಂದ ವಾಹನಗಳು   ಗುರುಪುರ ಕೈಕಂಬ ಜಂಕ್ಷನ್‍ನಿಂದ ಬಜ್ಪೆ ಮರವೂರಾಗಿ ನಗರ ಪ್ರವೇಶಿಸುವಂತೆ  ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕೆಲವು ವಾಹನಗಳಿಗೆ ಪಂಚಾಯತ್ ರಸ್ತೆ ಮೂಲಕ ಬಂಡಸಾಲೆಯಾಗಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಕೆಲವು ಬಸ್‍ಗಳ ಸಹಿತ ಇತರ ವಾಹನಗಳು ಅಣೆಬಳಿ ಹೆದ್ದಾರಿಯ ಒಂದು ಭಾಗದಲ್ಲಿ  ಸಂಚರಿಸುತ್ತಿದ್ದು, ಅಗಲ ಕಿರಿದಾದ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ರಸ್ತೆ ವಿಸ್ತರಿಸುವ ನಿಟ್ಟಿನಲ್ಲಿ ರಸ್ತೆ ಪಕ್ಕದಲ್ಲಿ ಜಲ್ಲಿಹುಡಿ ತುಂಬಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!