ಹೊಸದಿಗಂತ ವರದಿ ಹಾಸನ :
ಸಕಲೇಶಪುರ ಪಟ್ಟಣದಲ್ಲಿ ಭಾರಿ ಆಗುತ್ತಿದ್ದು ಮಳೆಯ ಆರ್ಭಟಕ್ಕೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿರುವ ಗ್ಯಾಸ್ ಗೋಡನ್ ಬಳಿ ಭೂ ಕುಸಿತ ಉಂಟಾಗಿದೆ.
ಎಡೆಬಿಡದೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದ್ದು ಬಾರಿ ಮಳೆಗೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ಗ್ಯಾಸ್ ಗೋಡನ್ ಬಳಿ ಕುಸಿತ ಉಂಟಾಗಿದೆ. ಬೇಲೂರು-ಸಕಲೇಶಪುರ ರಾಜ್ಯ ಹೆದ್ದಾರಿಗೆ ಬಾರಿ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದ್ದು ಇದೆ ರೀತಿ ಮಳೆ ಹಾಗೂ ಭೂ ಕುಸಿತ ಮುಂದುವರೆದರೆ ವಾಹನ ಸಂಚಾರ ಬಂದ್ ಸಾಧ್ಯತೆ ಇದೆ. ಮಣ್ಣಿನ ಜೊತೆ ಗಿಡ, ಮರಗಳು ನೆಲಕ್ಕುರುಳುತ್ತಿದ್ದು, ಆತಂಕದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಣ್ಣು ತೆರುವು ಕಾರ್ಯ :
ಸಕಲೇಶಪುರ ತಾಲ್ಲೂಕಿನ, ಆನೆಮಹಲ್ ಬಳಿ ಭೂಕುಸಿತ ಪ್ರದೇಶಕ್ಕೆ ಎಸಿ ಶೃತಿ, ತಹಸೀಲ್ದಾರ್ ಅರವಿಂದ್ ಭೇಟಿ ನೀಡಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಹಾಸನ ಮಾರ್ಗವಾಗಿ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯ ಎರಡು ಬದಿಗಳಲ್ಲೂ ವಾಹನಗಳನ್ನು ತಡೆದು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕುಸಿಯುವ ಹಂತರದಲ್ಲಿರುವ ಮಣ್ಣನ್ನು ಕೂಡ ಇಟಾಚಿ ಮೂಲಕ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಸ್ಥಳದಲ್ಲೇ ಎಸಿ ಶೃತಿ, ತಹಸೀಲ್ದಾರ್ ಅರವಿಂದ್ ಮೊಕ್ಕಾಂ ಹೂಡಿದ್ದಾರೆ.
ಸಕಲೇಶಪುರದಲ್ಲಿ ಮಳೆಹಾನಿಯಿಂದ ಭೂಕುಸಿತವಾಗಿದ್ದ ಸ್ಥಳಗಳನ್ನು ಸಂಸದ ಶ್ರೇಯಸ್.ಎಂ. ಪಟೇಲ್ ಕೂಡ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.