ಕೊಡಗಿನಲ್ಲಿ ಮೇಲಿಂದ ಮೇಲೆ ಭೂಕುಸಿತ-ಕಂಪನ: ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಆಗಿಂದಾಗ್ಗೆ ಸಂಭವಿಸುತ್ತಿರುವ ಭೂ ಕುಸಿತ ಮತ್ತು ಭೂಕಂಪಗಳಿಗೆ ವೈಜ್ಞಾನಿಕ ಕಾರಣಗಳನ್ನು ಪತ್ತೆ ಮಾಡಬೇಕೆಂದು ಕೋರಿರುವ ಅರ್ಜಿಯ ವಿಚಾರಣೆ ನಡೆಸಿರುವ ರಾಜ್ಯ ಉಚ್ಛ ನ್ಯಾಯಾಲಯವು, ಈ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕೊಡಗಿನಲ್ಲಿ ಪದೇಪದೇ ಸಂಭವಿಸುತ್ತಿರುವ ಭೂಕುಸಿತ ಹಾಗೂ ಭೂಕಂಪನದಿಂದಾಗಿ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಆದರೆ ಅದಕ್ಕೆ ನಿಖರ ಕಾರಣವನ್ನು ಪತ್ತೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ವಿಶೇಷ ತಂಡ ರಚನೆ ಮಾಡಲು ಆದೇಶಿಸಬೇಕು ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಎಂಬವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ‌ ಸಲ್ಲಿಸಿದ್ದರು.
ಅರ್ಜಿದಾರರ ಪರ ವಾದಿಸಿದ ವಕೀಲರು, 2018ರಲ್ಲಿ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಪ್ರಾಣ ಮತ್ತು ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಆದಾದ ನಂತರ ಪ್ರತಿವರ್ಷವೂ ಮಳೆಗಾಲದಲ್ಲಿ ಪ್ರವಾಹ, ಭೂ ಕುಸಿತದ ನಡುವೆ ಭೂಮಿಯ ಕಂಪನ ಮುಂದುವರಿದಿದ್ದು ಜನರು ನೆಮ್ಮದಿಯ ಜೀವನ ನಡೆಸಲಾಗುತ್ತಿಲ್ಲ.
ಜಿಲ್ಲೆಯಾದ್ಯಂತ ಭೂ ಕುಸಿತ ಮತ್ತು ಕಂಪನಗಳು ಹೆಚ್ಚಾಗುತ್ತಿದ್ದು, ಜೀವ ಹಾಗೂ ಆಸ್ತಿ-ಪಾಸ್ತಿ ಹಾನಿ ಪ್ರತಿವರ್ಷವೂ ಹೆಚ್ಚುತ್ತಲೇ ಇದೆ. ಇದರಿಂದಾಗಿ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣ ಪತ್ತೆ ಮಾಡಲು ಸರಕಾರ ಮುಂದಾಗಿಲ್ಲ ಎಂದು ಆರೋಪಿಸಿದರು.
ಕೊಡಗಿನಲ್ಲಿ ಮತ್ತೆ ಮತ್ತೆ ಭೂ ಕುಸಿತ ಸಂಭವಿಸುತ್ತಿರುವುದರಿಂದ ಸಹಸ್ರಾರು ಮಂದಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಜಿಲ್ಲೆಯ ಪರಿಸರದ ಮೇಲೂ ಪರಿಣಾಮಗಳಾಗುತ್ತಿವೆ. ಆದರೂ ಸರಕಾರ ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಅರಿಯಲು ಮುಂದಾಗಿಲ್ಲ. ಹಾಗಾಗಿ ಸರಕಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಹಾನಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ 2020ರಲ್ಲಿಯೇ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರ ದೂರಿದ ವಕೀಲರು, ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಭೂಕಂಪ ಮತ್ತು ಭೂ ಕುಸಿತಕ್ಕೆ ಕಾರಣಗಳನ್ನು ಪತ್ತೆ ಹಚ್ಚದ ಹಿನ್ನೆಲೆಯಲ್ಲಿ ಮತ್ತೆ ಇದೀಗ ಭೂಕಂಪಗಳು ಆಗುತ್ತಿವೆ. ಭೂಕಂಪ ಮತ್ತು ಹೆಚ್ಚಳಕ್ಕೆ ಅಕ್ರಮ ರೆಸಾರ್ಟ್‌ ಹಾಗೂ ಗಣಿಗಾರಿಕೆಯೇ ಕಾರಣವಾಗಿದ್ದೆ ಇದರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು. ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ವಿಶೇಷ ತಂಡ ರಚನೆಗೆ ಆದೇಶಿಸಬೇಕು ಎಂದು ಅರ್ಜಿದಾರರ ಪರ ವಾದಿಸಿದರು.
ಸಾರ್ವಜನಿಕ ಹಿತಾಸಕ್ತಿಯ ಅರ್ಜಿದಾರರ ಪರ ವಾದವನ್ಮು ಆಲಿಸಿದ ಹಂಗಾಮಿ ಮುಖ್ಯ ನ್ಯಾಯಾಧೀಶ ಅಲೋಕ್‌ ಅರಾಧೆ ಅವರಿದ್ದ ವಿಭಾಗೀಯ ಪೀಠ ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ಮೂರು ವಾರಗಳಲ್ಲಿ ಅಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಅಲ್ಲದೆ, ಕೊಡಗಿನ ಸಮಸ್ಯೆ ಬಗೆಹರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ಸರಕಾರಕ್ಕೆ ನಿರ್ದೇಶನ ನೀಡುವುದರೊಂದಿಗೆ ವಿಚಾರಣೆಯನ್ನು ಸೆಪ್ಟಂಬರ್ ಒಂದಕ್ಕೆ ಮುಂದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!