ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಡಿಎಂಕೆ ದಿನೇ ದಿನೇ ಆರೋಪ ಮಾಡುತ್ತಿದ್ದು, ಇದರ ನಡುವೆ ತಮಿಳು ಪರ ಕಾರ್ಯಕರ್ತರು ಭಾನುವಾರ ಪೊಲ್ಲಾಚಿ ರೈಲು ನಿಲ್ದಾಣದ ನಾಮಫಲಕದಲ್ಲಿರುವ ಹಿಂದಿ ಅಕ್ಷರಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲ್ಲಾಚಿ ಜಂಕ್ಷನ್ ಎಂದು ಹಿಂದಿಯಲ್ಲಿ ಬರೆದಿರುವ ಅಕ್ಷರಗಳಿಗೆ ತಮಿಳು ಪರ ಹೋರಾಟಗಾರರು ಕಪ್ಪು ಮಸಿ ಬಳಿದಿದ್ದಾರೆ .
ಈ ಸಂಬಂಧ ಪೊಲ್ಲಾಚಿಯ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ರೈಲ್ವೆ ಕಾಯ್ದೆಯಡಿ ದೂರು ದಾಖಲಿಸಿದ್ದು, ತಪಿತಸ್ಥರನ್ನು ಗುರುತಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ರೈಲ್ವೆ ಪಾಲ್ಘಾಟ್ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತ ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020) ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಡಿಎಂಕೆ ಆರೋಪಿಸಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.