Thursday, July 7, 2022

Latest Posts

ಕಾನೂನು ಪುಸ್ತಕಕ್ಕೆ ಸೀಮಿತವಾಗದೆ ಎಲ್ಲರೂ ಅರ್ಥೈಸಿಕೊಳ್ಳುವಂತಾಗಬೇಕು: ಹಿರಿಯ ಸಿವಿಲ್ ನ್ಯಾ. ಎನ್. ಸುಬ್ರಹ್ಮಣ್ಯ

ಹೊಸದಿಗಂತ ವರದಿ, ಕೊಡಗು:

ಕಾನೂನು ಕೇವಲ ಪುಸ್ತಕಕ್ಕೆ ಸೀಮಿತವಾಗಿರದೆ ಎಲ್ಲರೂ ಅರ್ಥೈಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದ್ದ ‘’ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013’’ ಕುರಿತ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಹಲವಾರು ಕಾನೂನುಗಳಿವೆ ಅದನ್ನು ತಿಳಿದವರು ತಿಳಿಯದವರಿಗೆ ಹೇಳಿ ಜಾಗೃತಿ ಮೂಡಿಸಬೇಕು. ಬಸವಣ್ಣನವರ ಆದರ್ಶಗಳನ್ನು, ತತ್ವಗಳನ್ನು ಪಾಲಿಸುವಂತಾಗಬೇಕು ಎಂದು ನುಡಿದರು.
ಮಹಿಳೆಯನ್ನು ಪೂಜಿಸಲ್ಪಡುತ್ತಿದ್ದ ಕಾಲವನ್ನು ಪ್ರಸ್ತುತ ಸಮಾಜವೂ ನೆನಪಿಸಿಕೊಳ್ಳಬೇಕು. ದೇಶದಲ್ಲಿ ಎಷ್ಟೋ ನದಿಗಳಿಗೂ ಸಹ ಹೆಣ್ಣಿನ ಹೆಸರನ್ನೇ ಇಡಲಾಗಿದೆ. ಇದು ಹೆಣ್ಣಿಗೆ ಸಲ್ಲುತ್ತಿರುವ ಪ್ರಾಮುಖ್ಯತೆ ಸೂಚಿಸುತ್ತದೆ ಎಂದರು.
ವಕೀಲರಾದ ಮೀನಾ ಕುಮಾರಿ ಅವರು ಮಾತನಾಡಿ, ಕಾನೂನು ಎಂಬುದು ನಿಂತ ನೀರಲ್ಲ, ಹರಿಯುವ ನೀರು. ಪುರುಷರು ಮಹಿಳೆಯನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಕಿರಿಕಿರಿ ಉಂಟಾದಲ್ಲಿ, 10 ಕ್ಕಿಂತ ಹೆಚ್ಚು ಮಹಿಳಾ ನೌಕರರು ಕೆಲಸ ನಿರ್ವಹಿಸುವ ಕಚೇರಿಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಲಾಗುವುದು. ಹಾಗೂ 10 ಕ್ಕಿಂತ ಕಡಿಮೆ ಮಹಿಳಾ ನೌಕರರಿದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸ್ಥಳೀಯ ದೂರು ಸಮಿತಿಯನ್ನು ಸಂಪರ್ಕಿಸಬಹುದಾಗಿದೆ. ಸಮಿತಿ ರಚನೆಗೆ ಎನ್‍ಜಿಒ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ. ನ್ಯಾಯಾಲಯದಂತೆ ಪ್ರಕರಣದ ತೀರ್ಪು ನಡೆಯುತ್ತದೆ ಎಂದರು.
ದೌರ್ಜನ್ಯವಾದ ಮಹಿಳೆಗೆ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾದಲ್ಲಿ, ವರ್ಗಾವಣೆಯನ್ನು ಪಡೆಯಬಹುದು ಅಥವಾ ದೌರ್ಜನ್ಯ ನಡೆಸಿದ ಪುರುಷನ ಅನುಚಿತ ವರ್ತನೆಯ ಸಾಬೀತಿನ ಮೇರೆಗೆ ಅವರನ್ನು ವರ್ಗಾಯಿಸಬಹುದು ಎಂದು ಹೇಳಿದರು.
ಕಿರುಕುಳದಿಂದ ಮಹಿಳೆ ಕೆಲಸ ಬಿಟ್ಟರೆ ಅಥವಾ ಆತ್ಮಹತ್ಯೆಗೆ ಶರಣಾದಲ್ಲಿ, ಅವರ ಕುಟುಂಬಸ್ಥರು ಸಮಿತಿಯಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಳ್ಳಬಹುದು. ದೂರು ನೀಡಲು ಹಿಂಜರಿಯಬಾರದು. ಹೆದರಿದಷ್ಟೂ ದೌರ್ಜನ್ಯ ಹೆಚ್ಚುತ್ತವೆ. ಪ್ರತಿ ಹೆಣ್ಣು ಮಗಳಿಗೂ ಸಮಾನತೆಯಿಂದ ಕೆಲಸ ಮಾಡುವ ಹಕ್ಕಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಮಾತನಾಡಿ, ಕೆಲಸಕ್ಕೆ ಹೋಗುವ ಮಹಿಳೆ ಧೈರ್ಯದಿಂದ ಕೆಲಸ ಮಾಡುವಂತಾಗಬೇಕು ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು ಎಂದರು.
ಮಾನಸಿಕ ಅಥವಾ ಲೈಂಗಿಕ ತೊಂದರೆಗೊಳಗಾದ ಮಹಿಳೆಯು ಸ್ಥಳೀಯ ದೂರು ನಿವಾರಣಾ ಸಮಿತಿಗೆ ಹಿಂಜರಿಯದೆ ದೂರು ನೀಡುವಂತಾಗಬೇಕು. ಅವರಿಗೆ ಭಾವನಾತ್ಮಕ ಬೆಂಬಲವನ್ನು ಕೊಟ್ಟು ಧೈರ್ಯ ತುಂಬಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುತ್ತಣ್ಣ ಅವರು ಮಾತನಾಡಿ, ಸಮಿತಿಗಳು ಹೆಸರಿಗೆ ಮಾತ್ರ ರಚನೆ ಆಗದೇ ಕಾರ್ಯ ನಿರ್ವಹಿಸುವಂತಾಗಬೇಕು. ನೊಂದವರು ಸಮಿತಿಯನ್ನು ಸದುಪಯೋಗಿಸಿಕೊಳ್ಳಬೇಕು ಹಾಗೂ ಅದರ ಅರಿವನ್ನು ಮೂಡಿಸುವ ಸಲುವಾಗಿ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಹೇಳಿದರು.
ಚಂದ್ರಿಕಾ ಪ್ರಾರ್ಥಿಸಿದರೆ, ಸತ್ಯಭಾಮಾ ನಿರೂಪಿಸಿದರು, ಪ್ರಭಾವತಿ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಮಹಿಳಾ ಅಭಿವೃದ್ಧಿ ಅಧಿಕಾರಿ ವಿಮಲಾ ಹಾಗೂ ಹಲವು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss