ಸಿಧು ಹತ್ಯೆಯ ಹಿಂದಿನ ಮಾಸ್ಟರ್‌ ಮೈಂಡ್‌ ಲಾರೆನ್ಸ್ ಬಿಷ್ಣೋಯ್, ದೆಹಲಿ ಪೊಲೀಸರ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಚ್‌.ಎಸ್.ಧಲಿವಾಲ್‌ ಈ ವಿಷಯವನ್ನು ಬಹಿರಂಗಪಡಿಸಿದರು. ಕಳೆದ ತಿಂಗಳು 29ರಂದು ಸಿಧು ಹತ್ಯೆ ಮಾಡಿಸಿದ್ದು ನಾವೇ ಎಂದು ಕೆನಡಾದ ಗ್ಯಾಂಗ್‌ಸ್ಟರ್‌ ಒಪ್ಪಿಕೊಂಡಿದ್ದರು. ಜೊತೆಗೆ ಈ ಕೊಲೆಯ ಹಿಂದಿರುವುದು ಲಾರೆನ್ಸ್ ಬಿಷ್ಣೋಯ್ ಎಂಬ ಮಾಹಿತಿ ನೀಡಿದ್ದ. ಗ್ಯಾಂಗ್‌ಸ್ಟರ್‌ ಹೇಳಿಕೆ ಆಧಾರದ ಮೇರೆಗೆ ತಿಹಾರ್ ಜೈಲಿನಲ್ಲಿರುವ ಬಿಷ್ಣೋಯ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಚಾರಣೆ ವೇಳೆ ಬಿಷ್ಣೋಯ್ ಸಿಧು ಹತ್ಯೆಯಲ್ಲಿ ತನ್ನ ಕೈವಾಡವಿದೆ ಎಂಬುದನ್ನು ನಿರಾಕರಿಸದರೂ ಸಹ ಪೊಲೀಸರು ಈ ಕೇಸ್‌ನಲ್ಲಿ ಆತನನ್ನು ಪ್ರಮುಖ ಮಾಸ್ಟರ್ ಮೈಂಡ್ ಎಂದು ಗುರುತಿಸಿದ್ದಾರೆ. ಈ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಈಗಾಗಲೇ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಸಿಧು ಹತ್ಯೆಯಲ್ಲಿ ಭಾಗಿಯಾಗಿರುವ ಐವರು ಶೂಟರ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ. ಇವರಲ್ಲಿ ಶೂಟರ್ ಸಿದ್ಧೇಶ್ ಹಿರಾಮನ್ ಕಾಮ್ಲೆ ಅಲಿಯಾಸ್ ಮಹಾಕಾಲ್ ಎಂಬಾತನನ್ನು ಬಂಧಿಸಲಾಗಿದೆ. ಈ ಕೊಲೆಯ ಪ್ರಮುಖ ಶೂಟರ್‌ಗೆ ಮಹಾಕಾಲ್ ಅತ್ಯಂತ ಹತ್ತಿರದವನು. ಮಹಾಕಾಲ್ ಸಿಧುಗೆ ನೇರವಾಗಿ ಗುಂಡು ಹಾರಿಸದಿದ್ದರೂ, ಕೊಲೆಯಲ್ಲಿ ಭಾಗಿಯಾಗಿದ್ದನಂತೆ. ಮಹಾಕಾಲನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ದೆಹಲಿ ಪೊಲೀಸರು ಪ್ರಸ್ತುತ ಪ್ರಕರಣದ ತ್ವರಿತ ತನಿಖೆ ನಡೆಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಪ್ರಮುಖ ಶೂಟರ್‌ಗಳನ್ನು ಹಿಡಿಯುವುದಾಗಿ ಧಲಿವಾಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!