Thursday, August 11, 2022

Latest Posts

ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ: ಸರಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ 4ನೇ ತರಗತಿ ವಿದ್ಯಾರ್ಥಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಮೊದಲ ಭಾಷೆ ಅಥವಾ ಎರಡನೇ ಭಾಷೆಯಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು ಎಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್​ಇ) ಮತ್ತು ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್​ಇ) ಪಠ್ಯಕ್ರಮವಿರುವ ಶಾಲೆಗಳಲ್ಲೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸಲು ನಿಯಮ ಜಾರಿ ಮಾಡಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿ ಕೀರ್ತನ್ ಸುರೇಶ್ ಕೋರ್ಟ್ ಮೊರೆ ಹೋಗಿದ್ದಾನೆ.
2018ರ ಕನ್ನಡ ಭಾಷೆ ಕಲಿಕೆ ಕಾಯ್ದೆ ಅಸಂವಿಧಾನಿಕ, ಅಕ್ರಮವಾದುದು. ಸಿಬಿಎಸ್​ಇ, ಐಸಿಎಸ್​ಇ ಸಿಲೆಬಸ್ ಇರುವ ಶಾಲೆಗಳಲ್ಲಿ ಈ ನಿಯಮವನ್ನು ಅಳವಡಿಕೆ ಮಾಡಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿ ಅರ್ಜಿ ಸಲ್ಲಿಸಿದ್ದಾನೆ. ಈ ಕುರಿತು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ 3 ವಾರಗಳ ಬಳಿಕ ಈ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.
ವರ್ಗಾವಣೆಯಾಗುವ ಉದ್ಯೋಗದಲ್ಲಿರುವ ಜನರು ತಮ್ಮ ಮಕ್ಕಳನ್ನು ಸಿಬಿಎಸ್​ಇ ಅಥವಾ ಐಸಿಎಸ್​ಇ ಸಿಲೆಬಸ್ ಇರುವ ಶಾಲೆಗಳಿಗೆ ಸೇರಿಸಲು ಆದ್ಯತೆ ನೀಡುತ್ತಾರೆ. ಇದರಿಂದ ದೇಶದ ಯಾವುದೇ ಮೂಲೆಗೆ ವರ್ಗಾವಣೆಯಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದಿಲ್ಲ ಎಂಬ ಯೋಚನೆ ಅವರದ್ದು. ಆದರೆ, ಕನ್ನಡ ಭಾಷೆಯನ್ನು ಪ್ರಥಮ ಅಥವಾ ಎರಡನೇ ಭಾಷೆಯಾಗಿ ಕಡ್ಡಾಯಗೊಳಿಸಿದರೆ ಆ ಮಕ್ಕಳಿಗೆ ತೊಂದರೆ ಆಗುತ್ತದೆ. ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿ ಕನ್ನಡ ಭಾಷೆ ಪಠ್ಯದಲ್ಲಿ ಇರುವುದಿಲ್ಲ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss