ವೀಸಾ ನಿಯಮ ಉಲ್ಲಂಘಿಸಿದ 81 ಚೀನಿಯರಿಗೆ ಲೀವ್‌ ಇಂಡಿಯಾ ನೋಟೀಸ್‌: ಸಂಸತ್ತಿಗೆ ಮಾಹಿತಿ ನೀಡಿದ ಗೃಹ ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗಾಗಿ 2019 ರಿಂದ 2021 ರವರೆಗೆ 81 ಚೀನೀ ಪ್ರಜೆಗಳಿಗೆ “ಭಾರತ ಬಿಟ್ಟು ತೊಲಗಿ ನೋಟಿಸ್” (ಲೀವ್‌ ಇಂಡಿಯಾ ನೋಟೀಸ್) ನೀಡಲಾಗಿದೆ ಎಂದು ಸರ್ಕಾರ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ.‌ ಇತರ 726 ಚೀನೀ ಪ್ರಜೆಗಳನ್ನು ಪ್ರತಿಕೂಲ ಪಟ್ಟಿಯಲ್ಲಿ ಇರಿಸಲಾಗಿದೆ ಹಾಗೂ 2019 ರಿಂದ 2021 ರ ನಡುವೆ 117 ಚೀನೀ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು “ಸರ್ಕಾರವು ಮಾನ್ಯವಾದ ಪ್ರಯಾಣ ದಾಖಲೆಗಳೊಂದಿಗೆ ಪ್ರವೇಶಿಸುವ ವಿದೇಶಿಯರ (ಚೀನೀ ಪ್ರಜೆಗಳನ್ನು ಒಳಗೊಂಡಂತೆ) ದಾಖಲೆಗಳನ್ನು ನಿರ್ವಹಿಸುತ್ತದೆ. ಕೆಲವು ವಿದೇಶಿಗರು ಅಜ್ಞಾನದಿಂದಾಗಿ ಅಥವಾ ವೈದ್ಯಕೀಯ ತುರ್ತುಸ್ಥಿತಿ ಅಥವಾ ಇತರ ವೈಯಕ್ತಿಕ ಕಾರಣಗಳಂತಹ ಬಲವಾದ ಸಂದರ್ಭಗಳಲ್ಲಿ ವೀಸಾ ಅವಧಿಯನ್ನು ಮೀರಿ ಇರುತ್ತಾರೆ. ಉದ್ದೇಶಪೂರ್ವಕವಲ್ಲದ ಅಥವಾ ಅಜ್ಞಾನದ ಕಾರಣ ಅಥವಾ ಬಲವಾದ ಸಂದರ್ಭಗಳಲ್ಲಿ, ದಂಡದ ಶುಲ್ಕವನ್ನು ವಿಧಿಸಿದ ನಂತರ ಅವಧಿಯನ್ನು ಕ್ರಮಬದ್ಧಗೊಳಿಸಲಾಗುತ್ತದೆ ಮತ್ತು ಅಗತ್ಯವಿದ್ದರೆ ವೀಸಾವನ್ನು ವಿಸ್ತರಿಸಲಾಗುತ್ತದೆ. ಉದ್ದೇಶಪೂರ್ವಕ ಅಥವಾ ನ್ಯಾಯಸಮ್ಮತವಲ್ಲದ ಪ್ರಕರಣಗಳಲ್ಲಿ ವಿದೇಶಿಯರ ಕಾಯಿದೆ 1946 ರ ಪ್ರಕಾರ ವಿದೇಶಿಯರಿಗೆ ಲೀವ್ ಇಂಡಿಯಾ ನೋಟಿಸ್ ನೀಡುವುದು ಸೇರಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಅವರಿಗೆ ದಂಡ ಶುಲ್ಕ ಅಥವಾ ವೀಸಾ ಶುಲ್ಕ ವಿಧಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಇದರ ನಡುವೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಮೂವರು ಚೀನಾ ಪ್ರಜೆಗಳು, ಅವಧಿ ಮುಗಿದ ವೀಸಾಗಳೊಂದಿಗೆ ದೇಶದಲ್ಲಿ ವಾಸಿಸುತ್ತಿದ್ದ ಇಬ್ಬರನ್ನು ಮತ್ತು ಭಾರತೀಯ ದಾಖಲೆಗಳನ್ನು ನಕಲಿ ಮಾಡಿದ್ದಕ್ಕಾಗಿ ಒಬ್ಬರನ್ನು ಬಂಧಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಆರೋಪಿಗಳನ್ನು ಗ್ರೇಟರ್ ನೋಯ್ಡಾದಲ್ಲಿ ತಂಗಿದ್ದ ಚೆನ್ ಜುನ್‌ಫೆಂಗ್ ಮತ್ತು ಲಿಯು ಪೆಂಗ್‌ಫೀ ಮತ್ತು ನೋಯ್ಡಾದಲ್ಲಿ ವಾಸಿಸುತ್ತಿದ್ದ ಜಾಂಗ್ ಕಿಚಾವೊ ಎಂದು ಗುರುತಿಸಲಾಗಿದೆ.

ಮೂಲಗಳ ವರದಿ ಪ್ರಕಾರ ಕಳೆದ ಎರಡು ತಿಂಗಳಿನಿಂದ, ನೋಯ್ಡಾ ಪೊಲೀಸರು ನೋಯ್ಡಾ ಅಥವಾ ಗ್ರೇಟರ್ ನೋಯ್ಡಾದಲ್ಲಿ ಅಕ್ರಮವಾಗಿ ತಂಗಿರುವ ಅಥವಾ ಇತರ ಕಾನೂನುಗಳನ್ನು ಉಲ್ಲಂಘಿಸುತ್ತಿರುವ ಸುಮಾರು 30 ಚೀನೀ ಪ್ರಜೆಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!