ಬಿಜೆಪಿ ಮೇಲೆ ಆರೋಪ ಹೊರೆಸುವುದಕ್ಕೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಿಕ್ಕುಬಿತ್ತು ಎಡಪಂಥೀಯ ‘ದ ವೈರ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇದೀಗ ಎರಡು ವಾರಗಳ ಹಿಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಎಡಪಂಥೀಯ ಆಂಗ್ಲ ಮಾಧ್ಯಮ ʼದಿ ವೈರ್‌ʼ ನ ಮುಖವಾಡವನ್ನು ಕಳಚಿಟ್ಟಿವೆ. ಹೇಗೆ ಸತ್ಯಗಳನ್ನು ತಿರುಚಿ, ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಜನರನ್ನು ʼದಿ ವೈರ್‌ʼ ಹೇಗೆ ತಪ್ಪುದಾರಿಗೆ ಎಳೆಯುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ಒಪಿಂಡಿಯಾದ ವರದಿಯೊಂದು ವಿವರಿಸಿದೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಯಾವುದಾದರೂ ಸಾಮಾಜಿಕ ಜಾಲತಾಣದ ಪೋಸ್ಟ್‌ ಗಳನ್ನು ತೋರಿಸಿದರೆ ಸಾಕು, ಫೇಸ್ಬುಕ್‌ ಇನ್ಸ್ಟಾಗ್ರಾಂ ಗಳ ಮಾತೃ ಸಂಸ್ಥೆ ಮೆಟಾ ಅದನ್ನು ಮರು ಮಾತಿಲ್ಲದೇ ಕಿತ್ತೊಗೆಯುತ್ತದೆ ಎಂದು ‌ʼದಿ ವೈರ್ʼ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಅದಕ್ಕೆ ತನ್ನ ಬಳಿ ಸಾಕ್ಷ್ಯಗಳೂ ಇರುವುದಾಗಿ ʼದಿ ವೈರ್‌ʼ ಮಾಧ್ಯಮವು ಹೇಳಿಕೊಂಡಿತ್ತು. ಆದರೆ ʼದಿ ವೈರ್‌ʼ ನ ಈ ಆರೋಪವು ಹೇಗೆ ಸುಳ್ಳು ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಚ್ಚಿಡಲಾಗಿದೆ. ಮೆಟಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಅಧಿಕಾರಿಗಳು, ಸಂಪರ್ಕಾಧಿಕಾರಿಗಳು ಮುಂತಾದವರು ಎಳೆ ಎಳೆಯಾಗಿ ʼದಿ ವೈರ್‌ʼನ ಮಿಥ್ಯಾರೋಪಗಳನ್ನು ಬಿಚ್ಚಿಟ್ಟಿದ್ದಾರೆ.  ನಿರಂತರ ಎರಡುವಾರಗಳ ತಿಕ್ಕಾಟಗಳ ನಂತರ ʼದಿ ವೈರ್‌ʼ ಈ ಚರ್ಚೆಯಿಂದ ಹಿಂದೆ ಸರಿಯುವುದಾಗಿ ಹೇಳಿಕೊಂಡಿರುವುದು ʼಗುಟ್ಟು ರಟ್ಟಾಗುತ್ತಿದ್ದಂತೆಯೇ ಬಾಲ ಮುದುಡಿಕೊಳ್ಳುವ ಎಡಪಂಥೀಯ ಸ್ವಭಾವಕ್ಕೆʼ ಹಿಡಿದ ಕೈಗನ್ನಡಿಯೋ ಎಂಬಂತೆ ತೋರುತ್ತಿದೆ.

ಘಟನೆ ಶುರುವಾದದ್ದೆಲ್ಲಿಂದ?
ಅಕ್ಟೋಬರ್‌ 6 ರಂದು ಇನ್‌ಸ್ಟಾಗ್ರಾಮ್ ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ದೇವಾಲಯ’ದ ಫೋಟೋವನ್ನು ತೆಗೆದುಹಾಕಿದೆ ಎಂದು ದಿ ವೈರ್ ವರದಿ ಮಾಡಿದೆ. ವರದಿಯ ಪ್ರಕಾರ, ಚಿತ್ರವನ್ನು Instagram ಹ್ಯಾಂಡಲ್ @cringearchivist ನಿಂದ ಅಪ್‌ಲೋಡ್ ಮಾಡಲಾಗಿದೆ ಮತ್ತು ಅದನ್ನು ‘ಲೈಂಗಿಕ ಚಟುವಟಿಕೆ ಮತ್ತು ನಗ್ನತೆ’ ನಿರ್ಬಂಧಗಳ ಮೇಲೆ ತೆಗೆದುಹಾಕಲಾಗಿದೆ. ಅಪ್‌ಲೋಡ್ ಮಾಡಲಾದ ಚಿತ್ರದಲ್ಲಿ ಲೈಂಗಿಕವಾಗಿ ಏನೂ ಇರಲಿಲ್ಲ. ಆದರೂ ಅದನ್ನು ಸುಳ್ಳು ಕಾರಣ ನೀಡಿ ತೆಗೆದು ಹಾಕಲಾಗಿದೆ ಎಂದು ʼದಿ ವೈರ್‌ʼ ನ ವರದಿ ಹೇಳಿತ್ತು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ @cringearchivist ಖಾತೆಯು ಬಲಪಂಥೀಯರ ಅದರಲ್ಲೂ ಹಿಂದೂ ವಿರೋಧಿ ಪೋಸ್ಟಗಳಿಂದಲೇ ಕುಖ್ಯಾತಿ ಪಡೆದಿತ್ತು. ಬಲಪಂಥೀಯ ಹಿಂದೂಗಳನ್ನ ಹಿಟ್ಲರನ ನಾಜಿಗಳೊಂದಿಗೆ ಹೋಲಿಕೆ ಮಾಡಿಯೂ ಕೆಲ ಪೋಸ್ಟ್‌ ಗಳನ್ನು, ಮೀಮ್‌ ಗಳನ್ನೂ ಹಾಕಲಾಗಿತ್ತು. ಇದನ್ನು ತೆಗೆದು ಹಾಕಿರುವುದರ ಹಿಂದೆ ಬಲಪಂಥೀಯ ಶಕ್ತಿಗಳ ಹುನ್ನಾರವಿದೆ ಎಂಬಂತೆ ವರದಿಯನ್ನು ʼದಿ ವೈರ್‌ ಪ್ರಕಟಿಸಿತು.

ಇದಾಗಿ ನಾಲ್ಕು ದಿನಗಳ ನಂತರ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ಈ ಪೋಸ್ಟ್‌ ಅನ್ನು ಪ್ಲಾಗೌಟ್‌ ಮಾಡಿದ್ದಾರೆ. ಅವರ ಖಾತೆಯು ಮೆಟಾದ XCheck ಪಟ್ಟಿಯಲ್ಲಿರುವುದರಿಂದ ಆ ಪೋಸ್ಟ್ ಗಳಿಗೆ ಮೇಲ್ಮನವಿಯನ್ನೂ ಸ್ವೀಕರಿಸಲಾಗಿಲ್ಲ. (XCheck ಎನ್ನುವುದು “ಮೆಟಾ ಪ್ರೋಗ್ರಾಂ” ಆಗಿದ್ದು, ಇದು ಮೆಟಾ ಅಡಿಯಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಟರು, ರಾಜಕಾರಣಿಗಳು ಮತ್ತು ಇತರ ಪ್ರಭಾವಿ ವ್ಯಕ್ತಿಗಳಂತಹ ಉನ್ನತ-ಪ್ರೊಫೈಲ್ ಬಳಕೆದಾರರಿಗೆ ವಿಶೇಷ ಸವಲತ್ತುಗಳನ್ನು ಒದಗಿಸುತ್ತದೆ.) ಈ ಹಿಂದೆಯೂ ಕೂಡ ಅಮಿತ್‌ ಮಾಳವೀಯ ಅವರು ಫ್ಲಾಗೌಟ್‌ ಮಾಡಿದ 700ಕ್ಕೂ ಹೆಚ್ಚು ಪೋಸ್ಟ್‌ ಗಳನ್ನು ಮರುಪ್ರಶ್ನೆಯಿಲ್ಲದೇ ತೆಗೆದುಹಾಕಲಾಗಿದೆ ಎಂದು ʼದಿ ವೈರ್ʼ ವರದಿ ಹೇಳಿದೆ. ಅಲ್ಲದೇ ಇದಕ್ಕೆ ಅಗತ್ಯ ಪುರಾವೆಯನ್ನೂ ಒದಗಿಸುವ ಹೆಸರಿನಲ್ಲಿ ಡಾಕ್ಯುಮೆಂಟ್‌ ಒಂದನ್ನ ಅದು ಹಂಚಿಕೊಂಡಿದೆ.

ಮೆಟಾದಿಂದ ಸ್ಪಷ್ಟನೆ:

ಆದರೆ ಈ ಆರೋಪಗಳು ಹೊರ ಬೀಳುತ್ತಿದ್ದಂತೆಯೇ ಸ್ವತಃ ಮೆಟಾ ಕಂಪನಿಯು ಸ್ಪಷ್ಟೀಕರಣ ನೀಡಿದ್ದು XCheck ಗೂ ಪೋಸ್ಟ್‌ ಗಳನ್ನು ರಿಪೋರ್ಟ್‌ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೆಟಾದ ಹಿರಿಯ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದರು. ಅಲ್ಲದೇ ʼದಿ ವೈರ್‌ʼ ಸಾಕ್ಷ್ಯ ಎಂದು ಹೇಳಿಕೊಳ್ಳುವ ಡಾಕ್ಯಮೆಂಟ್‌ ಅನ್ನು ತಯಾರಿಸಲಾಗಿದೆ ಎಂಬರ್ಥದಲ್ಲಿ ಅವರು ಟ್ವೀಟ್‌ ಮಾಡಿದ್ದರು. ಇದು ಟೆಕ್‌ ದಿಗ್ಗಜ ಮೆಟಾ ಹಾಗೂ ʼದಿ ವೈರ್‌ʼ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು.

ಇಷ್ಟಕ್ಕೇ ಸುಮ್ಮನಾಗದ ʼದಿ ವೈರ್‌ʼ ಇನ್ನೊಂದು ವರದಿಯಲ್ಲಿ ತನ್ನ ಸಾಕ್ಷ್ಯಗಳು ನಿಜ ಎಂದು ವಾದಿಸಿತು. ಅಲ್ಲದೇ ಅದಕ್ಕೆ ಪೂರಕವಾದ ಕೆಲ ಸ್ಕ್ರೀನ್‌ ಶಾಟ್ ಪುರಾವೆಗಳನ್ನೂ ಒದಗಿಸಿತು.

ಇದಕ್ಕೆ ಉತ್ತರವಾಗಿ ಮೆಟಾದ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಯೊಬ್ಬರು ದಿ ವೈರ್‌ನ ಸಂಪೂರ್ಣ ವರದಿಯು ಕೃತ್ರಿಮವಾಗಿದೆ ಮತ್ತು ನಕಲಿ ದಾಖಲೆಗಳನ್ನು ಆಧರಿಸಿದೆ ಎಂದು ಹೇಳಿದರು. ಅಲ್ಲದೇ ತಮ್ಮ ಟ್ವೀಟ್‌ ನಲ್ಲಿ ʼದಿವೈರ್‌ʼ ಹಂಚಿಕೊಂಡ ತಪ್ಪು ಮಾಹಿತಿಗಳನ್ನು ಉಲ್ಲೇಖಿಸಿದರು. ಬಳಕೆಯಲ್ಲಿಲ್ಲದ ಇಮೇಲ್‌, URLಗಳು, ಕಂಪನಿ ಬಳಸದ ವಿಳಾಸಗಳನ್ನು ಹೇಗೆ ನಕಲಿಯಾಗಿ ʼದಿ ವೈರ್‌ ಸೃಷ್ಟಿಸಿದೆ ಎಂಬುದನ್ನು ಅವರು ತೋರಿಸಿದರು.

ಇಲ್ಲಿಂದ ಮುಂದೆ ಪ್ರಕರಣವು ಬೇರೇ ಬೇರೆಯದೇ ರೀತಿಯಲ್ಲಿ ತಿರುವು ಪಡೆದುಕೊಂಡರೂ ʼದಿವೈರ್‌ʼ ಹಂಚಿಕೊಂಡ ಸುಳ್ಳು ದಾಖಲೆಗಳ ಕುರಿತು ಸರಿಯಾದ ಸ್ಪಷ್ಟೀಕರಣಗಳ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೇ ಫೋಟೋಶಾಪ್‌ ಮಾಡಲ್ಪಟ್ಟ ಸ್ಕ್ರೀನ್‌ ಶಾಟ್‌ ಗಳನ್ನು ಸಾಕ್ಷಿಯೆಂಬಂತೆ ʼದಿ ವೈರ್‌ʼ ಹಂಚಿಕೊಂಡಿದ್ದು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಎತ್ತಿ ತೋರಿಸಿದ್ದಾರೆ. ಈ ಕುರಿತು ಹಲವಾರು ರೀತಿಯ ತಿಕ್ಕಾಟಗಳ ನಂತರವೂ ಸರಿಯಾದ ಸ್ಪಷ್ಟೀಕರಣ ನೀಡಲು ʼದಿ ವೈರ್‌ʼ ಗೆ ಸಾಧ್ಯವಾಗಿಲ್ಲ. ಅಂತಿಮವಾಗಿ ʼದಿ ವೈರ್‌ʼ ತಾನು ಈ ಚರ್ಚೆಯಿಂದ ಹಿಂದೆ ಸರಿಯುವುದಾಗಿ ಹೇಳಿದೆ. ಆದರೆ ತನ್ನ ಸುಳ್ಳು ವರದಿಯನ್ನು ಸಾಬೀತುಪಡಿಸಲು ಅದು ಸರಿಯಾದ ಸ್ಪಷ್ಟೀಕರಣ ನೀಡಿಲ್ಲ ಎನ್ನಲಾಗಿದೆ.

ಈ ಕುರಿತು ಒಪಿಂಡಿಯಾ ಅನೇಕ ರೀತಿಯ ತನಿಖೆಗಳನ್ನು ನಡೆಸಿದ್ದು ʼದಿ ವೈರ್‌ʼ ನ ಮುಖವಾಡ ಕಳಚಿ ಬಿದ್ದಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಓಪಿಂಡಿಯಾದ ಈ ವರದಿಯನ್ನು ವೀಕ್ಷಿಸಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!