ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಡಿಸೆಂಬರ್ 31ರ ಮಂಗಳವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ಹಿನ್ನೆಲೆ, ಎಲ್ಲ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಲಾಗಿದ್ದು, ಟ್ರೈನೀಗಳಿಗೆ ಒಂದು ದಿನದ ಮಟ್ಟಿಗೆ ರಜೆ ನೀಡಲಾಗಿದೆ.
ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಣಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ಫೋಸಿಸ್ ಕಂಪನಿಯಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಕ್ಯಾಂಪಸ್ ಒಳಗೆ ಯಾರೂ ಪ್ರವೇಶ ಮಾಡದಂತೆ ನೋಡಿಕೊಳ್ಳಲು ಭದ್ರತಾ ತಂಡಕ್ಕೆ ನಿರ್ದೇಶಿಸಲಾಗಿದೆ.
‘ಆತ್ಮೀಯ ಇನ್ಫೋಸಿಸ್ ಉದ್ಯೋಗಿಗಳೇ ಇಂದು ಮೈಸೂರು ಡಿಸಿ ಕ್ಯಾಂಪಸ್‌ನಲ್ಲಿ ಕಾಡು ಪ್ರಾಣಿಯೊಂದು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಕಾರ್ಯಪಡೆಯ ಸಹಯೋಗದೊಂದಿಗೆ ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ,’ ಎಂದು ಟೆಕ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಆಂತರಿಕ ಸಂವಹನದ ಮೂಲಕ ತಿಳಿಸಿದೆ.
ಇನ್ನು ಎಲ್ಲ ಉದ್ಯೋಗಿಗಳು ಒಂದು ದಿನದ ಮಟ್ಟಿಗೆ (ಡಿ.31ರಂದು) ಮನೆಯಿಂದಲೇ ಕೆಲಸ ಮಾಡಲು ನಿಮ್ಮನ್ನು ವಿನಂತಿಸಲಾಗಿದೆ. ಕ್ಯಾಂಪಸ್‌ನೊಳಗೆ ಯಾರನ್ನೂ ಬಿಡದಂತೆ ಭದ್ರತಾ ತಂಡಕ್ಕೆ ಸೂಚನೆ ನೀಡಲಾಗಿದೆ. ಇನ್ನು ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ಗೆ ಚಿರತೆಯೊಂದು ಬಂದಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ಪ್ರಾಣಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮಾಡಲಾಗುತ್ತಿದ್ದರೂ ಈವರೆಗೆ ಸಿಕ್ಕಿಲ್ಲ.
ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಕಾಣಿಸಿಕೊಂಡಿದೆ. ನಮ್ಮ ತಂಡವು ಸುಮಾರು 4 ಗಂಟೆಗೆ ಸ್ಥಳಕ್ಕೆ ತಲುಪಿತು. ಚಿರತೆ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ತಿಳಿಸಿದ್ದಾರೆ .
ಇನ್ನು ಇನ್ಫೋಸಿಸ್ ಕಂಪನಿಯ ಆವರಣಕ್ಕೆ ಚಿರತೆ ಇದೇ ಮೊದಲ ಬಾರಿಗೆ ಪ್ರವೇಶಿಸಿಲ್ಲ. 2011ರಲ್ಲಿ ಒಂದು ಚಿರತೆ ಕ್ಯಾಂಪಸ್‌ಗೆ ನುಗ್ಗಿತ್ತು.