Monday, August 8, 2022

Latest Posts

ಬಿಜೆಪಿ ಮಹಾಶಕ್ತಿ ಕೇಂದ್ರಗಳನ್ನು ಗಟ್ಟಿಗೊಳಿಸೋಣ: ಕಲ್ಮರುಡಪ್ಪ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಬಿಜೆಪಿ ಮಹಾಶಕ್ತಿ ಕೇಂದ್ರಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ತಿಳಿಸಿದರು.
ಬಿಜೆಪಿ ಜಿಲ್ಲಾಕಚೇ ರಿಯಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮುಖಂಡರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿ ತನ್ನದೇ ಆದ ವೈಚಾರಿಕತೆ, ಸಿದ್ಧಾಂತಗಳನ್ನು ಒಳಗೊಂಡಿದ್ದು, ಇದರ ಆಧಾರದ ಮೇಲೆ ಪಕ್ಷ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ. ತತ್ವ ಸಿದ್ದಾಂತಗಳ ಮೇಲೆ ಪಕ್ಷ ಬಲಪಡಿಸುವಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಯ ಅವರು ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರಕ್ಕಾಗಿ ಕುಟುಂಬ ರಾಜಕಾರಣ ಮಾಡುತ್ತಿವೆ. ಆದರೆ ಕಾರ್ಯಕರ್ತರೇ ಮಾಲೀಕರಾಗಿರುವ ಏಕೈಕ ಪಕ್ಷ ಬಿಜೆಪಿ. ಇಲ್ಲಿ ಮುಂದಿನ ಅಧ್ಯಕ್ಷರು, ಪ್ರಧಾನಿಗಳು ಯಾರು ಎಂದು ಊಹಿಸುವುದು ಕಷ್ಟ. ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸಿ ಉನ್ನತ ಸ್ಥಾನ ಮಾನ ನೀಡುತ್ತದೆ ಚಿಕ್ಕಮಗಳೂರು ನಗರದ 6 ವಾರ್ಡ್‍ಗಳಲ್ಲಿನ ಮಹಾಶಕ್ತಿ ಕೇಂದ್ರಗಳನ್ನು ಗಟ್ಟಿಗೊಳಿಸಬೇಕಿದೆ ಅದಕ್ಕೆ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಕೇವಲ ಮುಂದಿನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಆಧಾರವಾಗಿರಿಸಿಕೊಂಡು ಪಕ್ಷ ಸಂಘಟಿಸುವ ಬದಲು ಮುಂದಿನ ಎಲ್ಲಾ ಕಾರ್ಯಗಳಿಗೂ ಸನ್ನದ್ದರಾಗಿರುವಂತೆ ಪಕ್ಷವನ್ನು ಬಲಪಡಿಸಬೇಕು. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಜಿಲ್ಲಾ ಬಿಜೆಪಿ ಹಲವು ಸಮಾಜಮುಖಿ ಸೇವೆಗಳ ಮೂಲಕ ಉತ್ತಮವಾಗಿ ಸ್ಪಂದಿಸಿದೆ, ಜನರ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ದೇವರಾಜ್‍ಶೆಟ್ಟಿ ಮಾತನಾಡಿ ನಗರದ 6 ವಾರ್ಡ್‍ಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಹಾಶಕ್ತಿ ಕೇಂದ್ರ ಅತ್ಯಂತ ಬಲಯುತವಾಗಿದೆ. ಪಕ್ಷದ ಸಂಘಟನೆಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್‍ಅರಸ್ ಮಾತನಾಡಿ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಬಿಜೆಪಿಯು ಉತ್ತಮ ಸಮಾಜಮುಖಿ ಚಟುವಟಿಕೆಗಳನ್ನು ಮಾಡಿದೆ. ಕೋವಿಡ್ 3ನೇ ಅಲೆಯ ಬಗ್ಗೆ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದರು.
ಸಿಡಿಎ ಮಾಜಿ ಅಧ್ಯಕ್ಷ ರಾಜಪ್ಪ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮಲ್ಲಿನ ನಡವಳಿಕೆ ಮತ್ತು ವ್ಯಕ್ತಿತ್ವ ಪಕ್ಷದ ಏಳಿಗೆಗೆ ಕಾರಣವಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಅಭಿಮಾನ ತೋರುವ ಬದಲು ಸಾಮಾಜಿಕವಾಗಿ ಪಕ್ಷವನ್ನು ಬಲಪಡಿಸಲು ಮುಂದಾಗಬೇಕು ಸರ್ಕಾರದ ಸಾಧನೆ, ಕಾರ್ಯಕ್ರಮಗಳನ್ನು ಜನರ ಮುಂದಿಡಬೇಕು ಎಂದು ಕಿವಿಮಾತು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಟರಾಜ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸೀತಾರಾಮಭರಣ್ಯ, ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾಶೆಟ್ಟಿ, ನಗರಸಭೆ ಮಾಜಿ ಉಪಾಧ್ಯಕ್ಷ ಗವನಹಳ್ಳಿಶ್ರೀನಿವಾಸ್, ಹರೀಶ್ ಸ್ವಾಗತಿಸಿ, ಬಸವರಾಜ್ ನಿರೂಪಿಸಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss