Saturday, July 2, 2022

Latest Posts

ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ಚೆಲ್ಲಾಟ ನಿಲ್ಲಿಸಲಿ: ಶಾಸಕ ಡಿ. ವೇದವ್ಯಾಸ ಕಾಮತ್

ಹೊಸ ದಿಗಂತ ವರದಿ, ಮಂಗಳೂರು:

ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ಚೆಲ್ಲಾಟ ಆಡುವುದನ್ನು ಮೊದಲು ನಿಲ್ಲಿಸಬೇಕು. ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಜನತೆ ವೆನ್ಲಾಕ್‌ಗೆ ಬರಲು ಭಯಪಡುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಆದರೆ ಕಾಂಗ್ರೆಸ್ ಜನತೆಯ ದಿಕ್ಕು ತಪ್ಪಿಸುತ್ತಿದ್ದು, ಬಡವರು ಸರಕಾರಿ ಆಸ್ಪತ್ರೆಗೆ ಬರದಂತೆ ಭಯ ತುಂಬುತ್ತಿದೆ. ಆರೋಗ್ಯ ವಿಷಯದ ಈ ರೀತಿಯ ರಾಜಕಾರಣ ಕಾಂಗ್ರೆಸ್‌ಗೆ ಶೋಭೆಯಲ್ಲ ಎಂದರು.
ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ವೆನ್ಲಾಕ್‌ಗೆ ಹೇಳಿಕೊಳ್ಳುವ ಯಾವ ಕೊಡುಗೆಯೂ ದೊರೆತಿಲ್ಲ. ಆದರೆ ಬಿಜೆಪಿ ಒಂದೇ ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಯು.ಟಿ.ಖಾದರ್ ಅವರು ರಾಜ್ಯದ ಆರೋಗ್ಯ ಸಚಿವರಾಗ್ದಿರೂ ವೆನ್ಲಾಕ್‌ಗೆ ಯಾವುದೇ ಲಾಭವಾಗಿಲ್ಲ. ವೆನ್ಲಾಕ್‌ನಲ್ಲಿ ಇದುವರೆಗೆ ಕೇವಲ 12 ಇಂಟೆನ್‌ಸಿವ್ ಕೇರ್ ಇತ್ತು. ಆದರೆ ಕೊರೋನಾ ಜಿಲ್ಲೆಯನ್ನು ಕಾಡಿದ ಬಳಿಕ ಒಂದೇ ವರ್ಷದಲ್ಲಿ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿ ಸರಕಾರದ ಮುತುವರ್ಜಿಯಿಂದಾಗಿ 70ವೆಂಟಿಲೇಟರ್‌ಗಳು ಸದ್ಯ ವೆನ್ಲಾಕ್‌ನಲ್ಲಿವೆ. ಅಲ್ಲದೆ 70 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಮೀಸಲಿರಿಸಲಾಗಿದೆ. ಒಟ್ಟು 90 ವೆಂಟಿಲೇಟರ್‌ಗಳು ಬಡವರಿಗೆ ಸುಲಭವಾಗಿ ದೊರೆಯುತ್ತಿವೆ. ವೆನ್ಲಾಕ್‌ನಲ್ಲಿ ಇದ್ದ 2 ಟನ್ ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ ಈಗ 12 ಟನ್‌ಗೆ ಏರಿಕೆಯಾಗಿದೆ. ಇವೆಲ್ಲವೂ ಬಡವರಿಗಾಗಿ ಮೀಸರಿಸಲಾಗಿದೆ ಎಂದರು.
ತಿಂಗಳೊಳಗೆ ಆಕ್ಸಿಜನ್ ಪ್ಲಾಂಟ್
ಮುಂದಿನ 30-40 ದಿನದೊಳಗೆ ವೆನ್ಲಾಕ್‌ನಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲಾಗುವುದು. 10 ದಿನದೊಳಗೆ 50 ವೆಂಟಿಲೇಟರ್‌ಗಳು ಬರಲಿದೆ. ಅಲ್ಲದೆ 250 ಆಕ್ಸಿಜನೇಟೆಡ್ ಬೆಡ್ ಅಳವಡಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ಮಾಡುವ ಬಗ್ಗೆಯೂ ಕೆಲಸ ಕಾರ್ಯಗಳಾಗುತ್ತಿವೆ. ಉಳ್ಳಾಲದಲ್ಲಿ ಈಗಾಗಲೇ 50 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಆಗುತ್ತಿದೆ. ಖಾದರ್ ಅವರು ಆರೋಗ್ಯ ಸಚಿವರಾಗಿದ್ದರೂ ತಮ್ಮ ಊರಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಹೇಳಿದ ಶಾಸಕ ಕಾಮತ್, ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಅಭಿವೃದ್ಧಿಯ ವಿಷಯ ಮಾತನಾಡುವುದನ್ನು ಬಿಟ್ಟು ಟೀಕೆ ಟಿಪ್ಪಣಿ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss