Sunday, December 3, 2023

Latest Posts

ಶಿಕ್ಷಣ ಸಮಾಜದ ಅಂಕುಡೊಂಕುಗಳ ತಿದ್ದುವ ಸಾಧನವಾಗಲಿ: ಸಿಎಂ ಸಿದ್ಧರಾಮಯ್ಯ

ಹೊಸ ದಿಗಂತ ವರದಿ, ಮೈಸೂರು:

ಮೌಢ್ಯ ಹಾಗೂ ಕಂದಾಚಾರದಿಂದ ಸಮಾಜದ ಹಿನ್ನಡೆಯಾಗುತ್ತದೆ. ಹಾಗಾಗಿ ಶಿಕ್ಷಣ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಧನವಾಗಬೇಕು. ವೈಚಾರಿಕ, ವೈಜ್ಞಾನಿಕ ಚಿಂತನೆಗೆ ಶಿಕ್ಷಣ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ನಗರದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ವತಿಯಿಂದ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ 20ನೆಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ವ್ಯವಸ್ಥೆಯಿದೆ. ಜಾತಿಯಿಂದಲೇ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿದೆ. ಶೂದ್ರರು, ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು. ಸಮಾಜದಲ್ಲಿ ಅವಕಾಶಗಳಿಂದ, ನ್ಯಾಯದಿಂದ ವಂಚಿತರಾಗಿದ್ದರೆ, ಅವರ ಪರಿಸ್ಥಿತಿಯನ್ನು ಸುಧಾರಿಸಬೇಕು. ಚಲನೆಯಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಿತರು ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು. ಶಿಕ್ಷಣದಿಂದ ಸಮಾಜಕ್ಕೆ ಚಲನೆ ದೊರೆತು ಆರ್ಥಿಕ, ಸಾಮಾಜಿಕ ಸಬಲತೆ ಸಾಧ್ಯವಾಗುತ್ತದೆ. ಇಂತಹ ಶಿಕ್ಷಣ, ಕಾಲೇಜುಗಳಲ್ಲಿ ದೊರೆಯಬೇಕು ಎಂದರು.

ಮುಖ್ಯಮಂತ್ರಿಯಾಗುವ ಕಲ್ಪನೆಯೂ ಇರಲಿಲ್ಲ
ನಾನು ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಮುಖ್ಯಮಂತ್ರಿಯಾಗುವ ಕಲ್ಪನೆಯೂ ಇರಲಿಲ್ಲ. ನಾನು ವೈದ್ಯನಾಗಬೇಕೆಂಬ ಆಸೆ ತಂದೆಯವರದಾಗಿತ್ತು. ಆದ್ದರಿಂದ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ. 1968 ರಲ್ಲಿ ಬಿಎಸ್ ಸಿ ಪದವಿ ಪಡೆದು, ನಾಲ್ಕು ವರ್ಷಗಳ ಕಾಲ ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವುದಾಗಿ ತಮ್ಮ ಕಾಲೇಜಿನ ದಿನಗಳ ನೆನಪುಗಳನ್ನು ಹಂಚಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!