ಮನೆ- ಮನದೊಳಗೆ ಕನ್ನಡಾಭಿಮಾನ ತುಂಬಿರಲಿ: ರಾಜೇಶ್ ಜಿ.ವಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ಕನ್ನಡ ಭಾಷೆ, ನಾಡು- ನುಡಿ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಕನ್ನಡಿಗರು ಹೊತ್ತುಕೊಳ್ಳಬೇಕು. ಅನೇಕ ಮಹನೀಯರು ಕನ್ನಡದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಮುಂಪಂಕ್ತಿಯನ್ನು ಮುಂದುವರೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಸಂಸ್ಕೃತಿ ಎತ್ತರದ ಸ್ಥಾನ ಪಡೆದಿದೆ. ಬೆಂಗಳೂರಿನಲ್ಲಿ ಭಾಷಾಭಿಮಾನ ಇದೆ. ದುರಭಿಮಾನ ಇಲ್ಲ; ಆದ್ದರಿಂದ ಎಲ್ಲರೂ ಇಲ್ಲಿಗೆ ಬರಲು ಬಯಸುತ್ತಾರೆ ಎಂದು ಅವರು ನುಡಿದರು.
ಅಭಿಮಾನ ಇದ್ದಾಗ ಭಾಷಾ ಪೋಷಣೆ ಕುರಿತು ಚಿಂತಿಸುತ್ತೇವೆ. ದುರಭಿಮಾನ ಇದ್ದರೆ ಇನ್ನೊಂದು ಭಾಷೆಯನ್ನು ದ್ವೇಷಿಸಲು ಬಯಸುತ್ತೇವೆ. ಎಲ್ಲ ಭಾಷೆಯನ್ನು ಒಪ್ಪಿಕೊಂಡು ನಮ್ಮ ಭಾಷೆ ಬೆಳೆಸಲು ಮುಂದಾಗುತ್ತೇವೆ ಎಂದರು. ಮನೆಗಳಲ್ಲಿ, ಪರಸ್ಪರ ಕನ್ನಡವನ್ನು ಮಾತನಾಡುತ್ತೇವಾ ಅಥವಾ ಆಮದು ಭಾಷೆ ಇಂಗ್ಲಿಷ್‍ನಲ್ಲಿ ಮಾತನಾಡುತ್ತಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಇಂಗ್ಲಿಷ್ ಗೊತ್ತಿದ್ದರೆ ಬುದ್ಧಿವಂತ ಎಂಬ ಭ್ರಮೆ ನಮ್ಮಲ್ಲಿದೆ. ಇದು ಸೂಕ್ತವಲ್ಲ ಎಂದು ತಿಳಿಸಿದರು.
ಅನೇಕ ಕನ್ನಡ ಶಬ್ದಗಳು, ಕ್ರಿಯಾಪದಗಳು ಇದೀಗ ಮಾಯವಾಗುತ್ತಿವೆ. ಭಾಷೆ ಬಳಸುತ್ತಿದ್ದರೆ ಮಾತ್ರ ಅದು ಉಳಿಯುತ್ತದೆ. ಕನ್ನಡ ಭಾಷೆಯ ಬಳಕೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಜಯನಗರ ಸಾಮ್ರಾಜ್ಯ, ಅನೇಕ ಕವಿಗಳು ಕನ್ನಡ ನಾಡು ನುಡಿ ರಕ್ಷಣೆಗೆ ಶ್ರಮಿಸಿದ್ದಾರೆ. ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿ ರಕ್ಷಿಸಲು ನಾವು ವರ್ಷಪೂರ್ತಿ ಶ್ರಮಿಸಬೇಕು. ಕೇವಲ ನವೆಂಬರ್ ತಿಂಗಳ ಒಂದು ದಿನ ಕನ್ನಡ ನೆನಪಾದರೆ ಸಾಲದು ಎಂದು ತಿಳಿಸಿದರು.
ರಾಜ್ಯ ಸರಕಾರದ ‘ಕೋಟಿ ಕಂಠ ಗಾಯನ’ ಒಂದು ಅದ್ಭುತ ಕಾರ್ಯಕ್ರಮ. ಅದು ಯಶಸ್ವಿಯಾಗಿದೆ. ಜನರ ಭಾಗವಹಿಸುವಿಕೆಯಿಂದ ಮಾತ್ರ ಸರಕಾರದ ಕಾರ್ಯಕ್ರಮ ಯಶಸ್ವಿ ಆಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಉತ್ತರ ನಗರ ಜಿಲ್ಲಾ ಅಧ್ಯಕ್ಷ ಬಿ. ನಾರಾಯಣಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!