ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭ ಪ್ರಾಥಮಿಕ-ಮಾಧ್ಯಮಿಕ ಶಾಲಾ ಶಿಕ್ಷಣದಲ್ಲಿಯೂ ಸಿಗಲಿ: ಮುಕುಂದ ಸಿ.ಆರ್.

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭವನ್ನು ಕೇವಲ ಕಾಲೇಜು ಶಿಕ್ಷಣದಲ್ಲಿ ಮಾತ್ರವಾಗದೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣದಲ್ಲಿಯೂ ಆಗುವಂತೆ, ಪ್ರಾಚೀನ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯ ಹೊಸ ಉದಾಹರಣೆಯಾಗಿ, ವಸತಿ ಶಾಲೆಗಳು ಮಾತ್ರವಲ್ಲದೇ ಸಾಮಾನ್ಯ ಶಾಲೆಗಳೂ ಅಳವಡಿಸಬೇಕಾದ ಮಾದರಿ ತಯಾರಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ.ಆರ್. ಹೇಳಿದರು.

ಭಾನುವಾರ ಚನ್ನೇನಹಳ್ಳಿಯ ಜನಸೇವಾ ವಿಸ್ವಸ್ತ ಮಂಡಳಿಯ ಜನಸೇವಾ ವಿದ್ಯಾ ಕೇಂದ್ರದ ಪೂರ್ಣ ಮಂಡಲೋತ್ಸವದ ಸಮಾರೋಪದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಸನಾತನ ವೌಲ್ಯಗಳ ಆಧಾರದಲ್ಲಿ ಹೊಸ ನೆಗತಕ್ಕೆ ಸಿದ್ಧವಾಗಬೇಕು ಎಂದು ಅವರು ಕರೆ ನೀಡಿದರು.

ಜಗತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಡೀ ಜಗತ್ತಿನಲ್ಲಿ 2013 ಕ್ಕಿಂತ ಮೊದಲು ಮಾನವ ಸಮುದಾಯ ಎಷ್ಟು ಡೇಟಾ ನಿರ್ಮಿಸಿತ್ತೋ ಅಷ್ಟನ್ನು 2013 ರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಿರ್ಮಿಸಲಾಗಿದೆ. ಇವತ್ತು ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳಿಗೂ ಮಿತಿ ಇದೆ. ಆದರೆ, ಎಲ್ಲವನ್ನು ಸಮಗ್ರವಾಗಿ ನೋಡುವಂತಹ ದೃಷ್ಟಿಯ ಅಗತ್ಯವಿದೆ. ಇದರಿಂದ ಮಕ್ಕಳು ಕಲಿಯುವ ಗತಿ ಹೆಚ್ಚಾಗುತ್ತದೆ. ನಮ್ಮ ಮೂಲ ವೌಲ್ಯಗಳನ್ನು ಒಳಗೊಂಡಿರುವ ಶಿಕ್ಷಣ ಬೇಕೆಂಬುದು ಹೆಚ್ಚಿನ ಪೋಷಕರ ಬೇಡಿಕೆಯೂ ಆಗಿದೆ ಎಂದು ಹೇಳಿದರು.

ಮಾಸ್ಟರ್ ಆಲ್ ಎಂಬುದು ನಮ್ಮ ಪ್ರಾಚೀನ ಪರಂಪರೆಯಲ್ಲಿ ಹಾಸ್ಯದ ವಿಷಯವಾಗಿರಲಿಲ್ಲ. ಬೇರೆ ಬೇರೆ ವಿಷಯಗಳನ್ನು ಬಹುಶಿಸ್ತೀಯವಾಗಿ ಕಲಿಯುವ ವ್ಯವಸ್ಥೆ ಭಾರತೀಯ ಶಿಕ್ಷಣದಲ್ಲಿತ್ತು. ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಅನೇಕ ವಿಷಯಗಳನ್ನು ಕಲಿಯಬಹುದು ಎಂಬುದನ್ನು ಅದು ತಿಳಿಸಿತ್ತು. ಈವರೆಗೆ ಏನು ಆಗಲಿರಲಿಲ್ಲವೋ ಅದನ್ನು ಆಗುವಂತೆ ಮಾಡುವುದೇ ಭಾರತೀಯ ಶಿಕ್ಷಣ ಮೂಲ ದೃಷ್ಟಿ ಎಂದರು.

ಜಗತ್ತು ಮತ್ತು ದೇಶದ ಕುರಿತ ಆರ್‌ಎಸ್‌ಎಸ್‌ನ ದೃಷ್ಟಿಕೋನದಲ್ಲಿ ಈ ಶಾಲೆ ಆರಂಭವಾಗಿತ್ತು. ನಂತರ ಇಂತಹ ವಿದ್ಯಾ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿವೆ. ಇದೀಗ ಜನಸೇವಾ ವಿದ್ಯಾ ಕೇಂದ್ರವು ಎನ್‌ಇಪಿಯಲ್ಲಿರುವ ಹಲವು ಅನುಕೂಲತೆಗಳನ್ನು ಬಳಸಿಕೊಂಡು ಬೇರೆ ಸಂಸ್ಥೆಗಳು ಹಾಗೂ ಗುಂಪುಗಳಿಗೆ ಮಾದರಿಯಾಗುವ ಹೊಸ ಮಾರ್ಗ ಸೃಷ್ಟಿಸುವತ್ತ ಯೋಚನೆ ಮಾಡಬೇಕು. ನಮ್ಮ ಗುರುಕುಲದ ಮಕ್ಕಳಿಗೆ ಸಿಗುವ ವೌಲ್ಯಾಧಾರಿತ ಶಿಕ್ಷಣವನ್ನು ಸಾಮಾನ್ಯ ಶಾಲೆಯ ವಿದ್ಯಾರ್ಥಿಗಳಿಗೆ ಹೇಗೆ ಕೊಡಬಹುದೆಂಬುದನ್ನು ಪ್ರಾಯೋಗಿಕವಾಗಿ ನಡೆಸಬೇಕಿದೆ ಎಂದು ತಿಳಿಸಿದರು.

ಜನಸೇವಾ ವಿದ್ಯಾ ಕೇಂದ್ರದ ವಿಶೇಷಾಂಕ ವಿದ್ಯಾಶ್ರೀ ಬಿಡುಗಡೆಗೊಳಿಸಿ ಮಾತನಾಡಿದ ಸೋಂದಾ ಸ್ವರ್ಣವಲ್ಲಿ ಮಠಾೀಶ ಶ್ರೀಗಂಗಾಧರೇಶ್ವರ ಸರಸ್ವತೀ ಸ್ವಾಮೀಜಿಯವರು , ಭಾರತೀಯ ಋಷಿ ಮುನಿಗಳು ನೀಡಿರುವ ಭಾರತೀಯ ಆಹಾರ ಪದ್ಧತಿ ಮತ್ತು ವೈವಾಹಿಕ ಪದ್ಧತಿಯನ್ನು ಮರೆಯುತ್ತಿರುವುದರಿಂದ ಇಂದು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆಹಾರ ಪದ್ಧತಿ ಬದಲಾವಣೆ ಮತ್ತು ಹತ್ತಿರದ ರಕ್ತ ಸಂಬಂಗಳಲ್ಲಿ ವಿವಾಹ ನಡೆಯುವ ಕಾರಣದಿಂದ ಸಮಾಜದಲ್ಲಿ ಬುದ್ಧಿಮಾಂದ್ಯ ಮಕ್ಕಳು ಜನಿಸುವ ಪ್ರಮಾಣ ಜಾಸ್ತಿಯಾಗುತ್ತಿದೆ. ಕೋವಿಡ್ ಸಾಂಕ್ರಾಮಿಕಕ್ಕೆ ಅನ್ವಯಿಸಿದರೆ, ಚೀನಾದಲ್ಲಿ ಮತ್ತೆ ರೋಗ ಉಲ್ಬಣಿಸುವುದಕ್ಕೆ ಇವೂ ಪ್ರಮುಖ ಕಾರಣಗಳು. ಆದರೆ, ಭಾರತೀಯ ಆಹಾರ ಪದ್ಧತಿ, ಆಚಾರ-ವಿಚಾರಗಳಿಂದ ನಾವು ಸಾಂಕ್ರಾಮಿಕವನ್ನು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದರು.

ಪೂರ್ಣ ಮಂಡಲೋತ್ಸವ ಸ್ವಾಗತಿ ಸಮಿತಿ ಅಧ್ಯಕ್ಷ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ಭಾರತೀಯ ದೃಷ್ಟಿಕೋನದ ವಿದ್ಯಾಭ್ಯಾಸದ ಆವಶ್ಯಕತೆ ಇದೆ. ಶಿಕ್ಷಣ ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸಬೇಕು. ದೇಶದ ಸ್ವಾತಂತ್ರ್ಯಕ್ಕೆ ನೂರು ವರ್ಷಗಳಾಗುವಾಗ ಜನಸೇವಾ ವಿದ್ಯಾಕೇಂದ್ರಕ್ಕೆ 75 ವರ್ಷಗಳಾಗುತ್ತವೆ. ಈ 25 ವರ್ಷಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ಜನಸೇವಾ ವಿಶ್ವಸ್ತ ಮಂಡಳಿ ನಿರ್ವಾಹಕ ವಿಶ್ವಸ್ತ ನಾ. ತಿಪ್ಪೇಸ್ವಾಮಿ, ಗೌರವ ಕಾರ್ಯದರ್ಶಿ ಅ.ಸಾ. ನಿರ್ಮಲ್‌ಕುಮಾರ್, ವೇದ ವಿಜ್ಞಾನ ಶೋಧ ಸಂಸ್ಥಾನದ ಅಧ್ಯಕ್ಷ ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ಜನಸೇವಾ ವಿದ್ಯಾ ಕೇಂದ್ರದ ಅಧ್ಯಕ್ಷ ಬಿ.ಎ. ಶ್ರೀನಿವಾಸ ಗುಪ್ತ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!