ಮತ ಮಾರಾಟಕ್ಕಿಲ್ಲ ಎನ್ನುವ ಮೂಲಕ ಯುವಕರು ಪ್ರಜಾಪ್ರಭುತ್ವದ ಕಾವಲುಗಾರರಾಗಲಿ- ಕಾಗೇರಿ

ಹೊಸದಿಗಂತ ವರದಿ ಮೈಸೂರು :

ಯುವಕರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗಬೇಕು. ಪ್ರತಿಯೊಬ್ಬ ಮತದಾರರು ನನ್ನ ಮತ ಮಾರಾಟಕ್ಕೆ ಇಲ್ಲ ಎಂಬ ತತ್ವಕ್ಕೆ ಅನುಗುಣವಾಗಿ ಮತ ಚಲಾಯಿಸಬೇಕು ಆಗ ಮಾತ್ರ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸಾಧ್ಯ ಎಂದು ವಿಧಾನ ಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಗುರುವಾರ ಮೈಸೂರಿನ ಕಲಾಮಂದಿರದಲ್ಲಿ ಚುನಾವಣಾ ವ್ಯವಸ್ಥೆ ಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಜಗತ್ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಇಡೀ ಜಗತ್ತಿಗೆ ಪ್ರಜಾ ಪ್ರಭುತ್ವದ ಬುನಾದಿಯನ್ನು ಬಸವಣ್ಣ ನವರ ಅನುಭವ ಮಂಟಪ ಹಾಕಿಕೊಟ್ಟಿತು, 1881 ರಲ್ಲೆ ಮೈಸೂರು ಮಹಾರಾಜರು ಪ್ರಜಾ ಪ್ರಭುತ್ವದ ಬುನಾದಿ ಹಾಕಿಕೊಟ್ಟರು ಎಂದರು.

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು, ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹನೀಯರ ಸಾಧನೆ ಅಪಾರ. ಸ್ವಾತಂತ್ರ್ಯ ಬಂದಾಗ ನಮಗೆ ಆಹಾರ ಕೊರತೆ ಇತ್ತು, ವಿದೇಶ ದಿಂದ ಆಹಾರ ತರಿಸಲಾಗುತ್ತಿತ್ತು. ಆದರೆ ಇಂದು ಆಹಾರದ ಸ್ವಾವಲಂಬನೆ ಸಾಧಿಸಿದ್ದೇವೆ, ಇದಕ್ಕೆ ಕಾರಣ ನಮ್ಮ ರೈತರು. ಸ್ವಾತಂತ್ರ್ಯ ಬಂದಾಗ 299 ರೂ ತಲಾ ಆದಾಯ ಇತ್ತು, ಇಂದು 1,18, 235 ಇದೆ. ಇಂದು 35 ಉಪಗ್ರಹಗಳನ್ನು ಏಕಕಾಲದಲ್ಲಿ ಹಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಕಾಲು ಇಡುತ್ತೇವೆ. ನಮ್ಮ ದೇಶದ ಸೈನ್ಯ ಬಲಿಷ್ಟ ವಾಗಿದೆ. ಆರೋಗ್ಯ ಕ್ಷೇತ್ರ ಉತ್ತಮವಾಗಿದ್ದು, ಕೋವಿಡ್ ಸಂದರ್ಭದಲ್ಲಿ ಲಸಿಕೆ ಕಂಡು ಹಿಡಿದು ನಮ್ಮ ದೇಶದ ಪ್ರಜೆಗಳಿಗೆ ಮಾತ್ರವಲ್ಲದೆ ಹೊರ ದೇಶಗಳಿಗೂ ಲಸಿಕೆ ಪೂರೈಕೆ ಮಾಡಲಾಗಿದೆ. ಜಿ20 ದೇಶಗಳ ಅಧ್ಯಕ್ಷತೆ ವಹಿಸಿ ಕೊಳ್ಳುವ ಕಾಲ ಬಂದಿದೆ ಎಂದರು.‌

ನಮ್ಮ ಸಂವಿಧಾನ ಜಗತ್ತಿನ ಅತಿ ಶ್ರೇಷ್ಠ ಸಂವಿಧಾನ. ಒಬ್ಬ ಸಾಮಾನ್ಯ ಪ್ರಜೆ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿ ಆಗಿರುವುದಕ್ಕೆ ಕಾರಣ ನಮ್ಮ ಸಂವಿದಾನ ಎಂದರು.
ಚುನಾವಣೆಗಳು ಇಂದು ಹಣ, ಹೆಂಡದ ಮೇಲೆ ನಡೆಯುತ್ತಿವೆ. ಇದಕ್ಕೆ ಸಂವಿಧಾನ ಬದ್ಧ ಸಂಸ್ಥೆಗಳು ಹಾಗೂ ಜನರು ಕಾರಣರಾಗಿದ್ದಾರೆ. ಕಾರ್ಯಾಂಗದಲ್ಲಿ ಇರುವ ಜಟಿಲತೆ ಹಾಗೂ ಅಧಿಕಾರಿಗಳ ಕಾರ್ಯವೈಖರಿಯಿಂದ ಜನರು ತತ್ತರಿಸುತ್ತಿದ್ದಾರೆ. ಸರ್ಕಾರದ 3 ಅಂಗಗಳಲ್ಲಿಯೂ ಲೋಪಗಳು ಕಂಡುಬರುತ್ತಿವೆ ಎಂದಿದ್ದಾರೆ.

ಸಮಾಜದಲ್ಲಿ ಕಲಬೆರಕೆಯ ಆಹಾರಗಳು ಕಂಡುಬರುತ್ತಿವೆ. ಕೇವಲ ಹಣಗಳಿಕೆಯ ಏಕಮೇವ ಉದ್ದೇಶ ದಿಂದ ಸಮಾಜದ ವವಸ್ಥೆಯನ್ನು ಹಾಳುಮಾಡಿದ್ದೇವೆ. ರಾಜಕಾರಣಿಗಳ ಇಂದಿನ ಮನಸ್ಥಿಗೆ ಮತದಾರರೇ ಕಾರಣ, ರಾಜಕಾರಣಿಗಳ ಮತ ಕೇಳಲು ಬಂದಾಗ ಮೂಲಭೂತ ಸೌಕರ್ಯಗಳನ್ನು ಕೇಳುವ ಬದಲು, ಆಸೆ ಆಮಿಷಗಳಿಗೆ ಒಳಗಾಗುತ್ತಿರಿ ಎಂದು ಮಾತನಾಡಿದ್ದಾರೆ.

ಮತದಾರರು ಮತವನ್ನು ಮಾರಾಟಕ್ಕೆ ಇಡಬೇಡಿ. ಉತ್ತಮ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತವನ್ನು ಚಲಾವಣೆ ಮಾಡಿ. ಚುನಾವಣಾ ಆಯೋಗ ಸ್ವತಂತ್ರ ಸಂವಿಧಾನಬದ್ಧ ಸಂಸ್ಥೆ, ಇದು ನಿರಂತರವಾಗಿ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕು. ಚುನಾವಣಾ ಆಯೋಗದ ಜವಾಬ್ಧಾರಿ ಹೆಚ್ಚಿದೆ ಎಂದು ಕಿವಿಮಾತು ಹೇಳಿದ್ದಾರೆ.

ಶೆಡ್ಯೂಲ್ 10 ನ್ನು ಸಂವಿಧಾನದಲ್ಲಿ ಜಾರಿಗೆ ತಂದು ಪಕ್ಷಾಂತರ ನಿಷೇದ ಕಾಯ್ದೆ ಜಾರಿಗೆ ತಂದು ಉತ್ತಮ ಕಾರ್ಯ ಮಾಡಲಾಗಿದೆ. ಮತದಾನದಲ್ಲಿ ನೋಟಾ ಹಾಕಲು ಅಧಿಕಾರ ನೀಡಲಾಗಿದೆ. ವಿವಿಧ ಸಮಿತಿಗಳು ಚುನಾವಣಾ ಸುಧರಣೆಗೆ ಹಲವು ವರದಿಗಳನ್ನು ನೀಡಿದ್ದು ಅವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.

ನನ್ನ ಮತ ಮಾರಾಟಕ್ಕೆ ಇಲ್ಲ ಎಂಬ ತತ್ವಕ್ಕೆ ಪ್ರತಿಯೊಬ್ಬರೂ ಬದ್ಧವಾಗಿರಬೇಕು. ಇದು ಅಭಿಯಾನದ ರೀತಿ ಜಾರಿಯಾಗಬೇಕು. ಹಿರಿಯರು ಮುಕ್ತವಾಗಿ ಯುವಕರಿಗೆ ಸಲಹೆ ಸೂಚನೆಗಳನ್ನು ನೀಡಬೇಕು. Pil ಕಾರಣದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗಳು ಆಗಿವೆ. ತ್ವರಿತವಾಗಿ ನ್ಯಾಯ ದೊರೆಯಬೇಕೆಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರಾದ ನಾಗೇಂದ್ರ, ತನ್ವೀರ್ ಸೇಠ್, ಮಹಾ ಪೌರರದ ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪೂರ್ಣಿಮಾ, ಉಪ ಮಹಾ ಪೌರರಾದ ರೂಪ, ಮಹಾ ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ, ಅವರು ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!