Friday, August 12, 2022

Latest Posts

ಕಾನೂನು ಬದ್ಧ ಪ್ರವಾಸೋದ್ಯಮ ನಡೆಯಲಿ: ಕೊಡಗು ಹಿತರಕ್ಷಣಾ ಬಳಗದ ಅಧ್ಯಕ್ಷ ರಾಜೀವ್ ಬೋಪಯ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣ ಈಗಾಗಲೇ ಸೃಷ್ಟಿಯಾಗಿರುವುದರಿಂದ ಯಾರೂ ಸಂಘರ್ಷಕ್ಕೆ ಅವಕಾಶ ನೀಡಬಾರದು. ಪ್ರವಾಸೋದ್ಯಮ ಕಾನೂನು ಬದ್ಧವಾಗಿ ಮುಂದುವರೆಯಬೇಕು ಮತ್ತು ಪರಿಸರ ಸ್ನೇಹಿಯಾಗಿರಬೇಕು ಎಂದು ಕೊಡಗು ಹಿತರಕ್ಷಣಾ ಬಳಗದ ಅಧ್ಯಕ್ಷ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ಸಭೆಯೊಂದರಲ್ಲಿ ತಾವು ಪ್ರವಾಸೋದ್ಯಮದ ವಿರುದ್ಧವಾಗಿ ಹೇಳಿಕೆ ನೀಡಿಲ್ಲ, ಬದಲಿಗೆ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವವರು ಮತ್ತು ವಿರೋಧಿಸುವವರು ಜಂಟಿಯಾಗಿ ಸಭೆ ನಡೆಸಿ ಕೊಡಗಿನ ಸಂಸ್ಕೃತಿ ಹಾಗೂ ಪರಿಸರಕ್ಕೆ ಧಕ್ಕೆಯಾಗದ ರೀತಿ ರೂಪುರೇಷಗಳನ್ನು ಸಿದ್ಧಪಡಿಸಲು ತಾನು ಸಲಹೆ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಪ್ರವಾಸೋದ್ಯಮವನ್ನು ನಾನು ವಿರೋಧಿಸಿಲ್ಲ. ಆದರೆ ಕೊಡಗಿನ ಪ್ರವಾಸೋದ್ಯಮವನ್ನೇ ಬಂಡವಾಳ ಮಾಡಿಕೊಂಡು ರಾಜ್ಯ ಮತ್ತು ಹೊರ ರಾಜ್ಯದ ಮಂದಿ ನಿಯಮ ಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕೆ ನನ್ನ ವಿರೋಧವಿದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ಬೇಡ: ಧಾರ್ಮಿಕ ಕೇಂದ್ರಗಳನ್ನು ಪ್ರವಾಸಿತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ದೇವಾಲಯಗಳಿಗೆ ಬರುವ ಪ್ರವಾಸಿಗರು ವಸ್ತ್ರ ಸಂಹಿತೆಯನ್ನು ಪಾಲನೆ ಮಾಡದೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಕಾನೂನಿಗೆ ವಿರುದ್ಧವಾದ ಪ್ರವಾಸಿ ಚಟುವಟಿಕೆಗಳು ನಡೆಯುತ್ತಿದೆ. ಬೆಟ್ಟಗುಡ್ಡಗಳಿಂದ ಕೂಡಿದ ಪಶ್ಚಿಮಘಟ್ಟ ವ್ಯಾಪ್ತಿಯ ಕೊಡಗಿನ ಭೌಗೋಳಿಕ ಶಕ್ತಿಗೆ ಮೀರಿ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಿ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಪ್ರವಾಸೋದ್ಯಮ ಬೆಳವಣಿಗೆ ಕಾಣಬೇಕು ಎಂದು ರಾಜೀವ್ ಬೋಪಯ್ಯ ಸಲಹೆ ನೀಡಿದ್ದಾರೆ.
ಪ್ರವಾಸೋದ್ಯಮದ ಪರ, ವಿರೋಧ ಎನ್ನುವ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಬಾರದು, ಬದಲಿಗೆ ಉಭಯ ಕಡೆಯವರು ಜಂಟಿಯಾಗಿ ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಕೊಡಗಿನ ಸಂಸ್ಕೃತಿ ಮತ್ತು ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು ಎರಡೂ ಕಡೆಯವರು ಸಮಾಲೋಚನೆ ನಡೆಸಬೇಕೆಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss