Tuesday, July 5, 2022

Latest Posts

ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸೋಣ: ಸಂಸದ ಮುನಿಸ್ವಾಮಿ ಕರೆ

ಹೊಸದಿಗಂತ ವರದಿ, ಕೋಲಾರ:

ಡಿಕೆಶಿ,ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯಲ್ಲೂ ಗೊಂದಲ ಮನೆ ಮಾಡಿದೆ, ಇದರ ಲಾಭ ಪಡೆದು ಜಿಪಂ,ತಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರಿಗೆ ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.
ಭಾನುವಾರ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಪಂ,ತಾಪಂ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಜೆಡಿಎಸ್‌ನಲ್ಲೂ ಗೊಂದಲ ಇರುವುದರಿಂದ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದರು.
ಬೂತ್, ಶಕ್ತಿ ಕೇಂದ್ರದ ಪದಾಧಿಕಾರಿಗಳು ಮನೆ ಮನೆಗೆ ಹೋಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಹೊಂದಾಣಿಕೆ ರಾಜಕೀಯಬೇಡ, ಪಕ್ಷದಲ್ಲಿದ್ದು ಮೋಸ ಮಾಡಿದವರನ್ನು ಸೇರಿಸಿಕೊಳ್ಳುವುದು ಬೇಡ. ಕೋಲಾರದಲ್ಲೂ ಗೆಲ್ಲುವ ಅವಕಾಶ ಇದೆ.ಕಾಂಗ್ರೆಸ್, ಜೆಡಿಎಸ್, ವರ್ತೂರು ಕಾಂಗ್ರೆಸ್ ನಡುವೆ ೨ ಸೀಟು ಗೆಲ್ಲಬಹುದು,ವೇಮಗಲ್ ಪ.ಪಂ ಚುನಾವಣೆಯೂ ಬರುತ್ತದೆ. ವಿವಿಧ ತಾಲೂಕುಗಳಲ್ಲಿ ಶಾಸಕರ ದುರಹಂಕಾರ ನೋಡಿ ಈಗ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು  ನುಡಿದರು
ಮಾಲೂರು, ಕೆಜಿಎಫ್, ಬಂಗಾರಪೇಟೆಯಲ್ಲಿ ಪಕ್ಷ ಸದೃಢವಾಗಿದೆ. ಜಿಂನಲ್ಲಿ ೧೦ ರಿಂದ ೧೨ ಸೀಟು ಬಂದರೆ ಅಧಿಕಾರ ಚುಕ್ಕಾಣಿ ಹಿಡಿಯಬಹುದು. ಟೀಂ ವರ್ಕ್ ಮಾಡಿಕೊಂಡು ಬೂತ್ ಬೂತ್ ಗಳಲ್ಲೂ ಪ್ರಚಾರ ಮಾಡ್ತೀವಿ. ಚುನಾವಣೆ ಶುರುವಾಗಿದೆ ಎಂದು ಭಾವಿಸಿ ಕಾರ್ಯಪ್ರವೃತ್ತರಾಗಿ, ತ.ನಾಡಿನಲ್ಲೂ ೫ ಸೀಟು ಗೆಲ್ತೀವಿ. ಪಶ್ಚಿಮ ಬಂಗಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ಬಿಜೆಪಿಗೆ ಒಳ್ಳೆಯ ಅವಕಾಶ ಇದೆ ಎಂದರು.
ಕಾಂಗ್ರೆಸ್, ಜೆಡಿಎಸ್ ಕರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಸಹಾಯ ಮಾಡಲು ಹೋಗಲ್ಲ, ಅದು ನಮಗೆ ಕ್ರೆಡಿಟ್,  ಜಿಲ್ಲೆಯಲ್ಲಿ ೧.೧೪ ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಇವರನ್ನು ಬದಲಾಯಿಸುವ ಕೆಲಸ ಆಗಬೇಕು, ತೀರಾ ಬಡವರನ್ನು ಆಸ್ಪತ್ರೆಗೆ ಜತೆಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಿ ವಾಪಸ್ ಬಿಟ್ಟುಬನ್ನಿ,  ಇದರಿಂದ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದರು.
ಏ. ೧೪ರಂದು ಎಲ್ಲಬೂತ್ ಗಳಲ್ಲೂ ಅಂಬೇಡ್ಕರ್ ಜಯಂತಿ ಆಚರಿಸಿ, ಅಂಬೇಡ್ಕರ್ ಕಾಂಗ್ರೆಸ್ ಆಸ್ತಿ ಎಂದುಕೊಂಡಿದ್ದಾರೆ. ಆದರೆ ಅವರು  ದೇಶದ, ಪ್ರಪಂಚದ ಆಸ್ತಿ, ಪ್ರಪಂಚದಲ್ಲಿ ಅತೀ ಹೆಚ್ಚು ಪ್ರತಿಮೆ ಇರೋದು ಅಂಬೇಡ್ಕರ್ ಅವರದ್ದು. ಅಂಬೇಡ್ಕರ್‌ಗೆ ಅತೀ ಹೆಚ್ಚು ತೊಂದರೆ ಕೊಟ್ಟಿದ್ದು ಕಾಂಗ್ರೆಸ್. ಈ ಬಗ್ಗೆ ಜನತೆಗೆ ಅರಿವು ಮೂಡಿಸಿ ಎಂದರು.
ಕೆಸಿ ವ್ಯಾಲಿ ಯೋಜನೆಯಡಿ ಹಿಂದಿನ ಸರ್ಕಾರ ೧೨೬ ಕೆರೆಗಳಿಗೆ ನೀರು ಹರಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಆದರೆ ಬಿಜೆಪಿ ಸರ್ಕಾರ ಎರಡನೇ ಹಂತದಲ್ಲಿ ೨೭೫ ಕೆರೆಗಳಿಗೆ ನೀರು ಹರಿಸಲು ೪೫೫ ಕೋಟಿ ಮಂಜೂರು ಮಾಡಿ ಟೆಂಡರ ಕರೆದಿದೆ. ಎತ್ತಿನಹೊಳೆ ಯೋಜನೆಗೆ ಅನುದಾನ ಮೀಸಲಿಟ್ಟಿದೆ ಎಂದು ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮಾತನಾಡಿ,ಏ.೧೮ರಂದು ರಾಜ್ಯ ಕಾರ್ಯಕಾರಣಿ ಇರುವುದರಿಂದ ಎಲ್ಲ ಕಡೆ ಮಂಡಲ ಪ್ರಶಿಕ್ಷಣ, ಮಂಡಲ್ ಸಹಲ್, ಜಿಲ್ಲಾ,ವಿವಿಧ ಮೋರ್ಚಾಗಳ ಸಹಲ್‌ಗಳನ್ನು ಮುಗಿಸಬೇಕು, ಬೂತ್ ಅಧ್ಯಕ್ಷರ ಪಟ್ಟಿ ಸಲ್ಲಿಸಿ, ಅಧ್ಯಕ್ಷರ ನೇಮ್‌ಬೋರ್ಡ್ ಪಕ್ಷದಿಂದಲೇ ಸಿದ್ದವಾಗಿ ತಲುಪಿಸಲಾಗುತ್ತದೆ. ಮನೆ ಮುಂದೆ ನಾಮಫಲಕ ಹಾಕಬೇಕು ಎಂದು ನುಡಿದರು.
ಏ. ೧೪ರಂದು ಅಂಬೇಡ್ಕರ್ ಅವರ ೧೩೧ನೇ ಜನ್ಮದಿನವನ್ನು ಜಿಲ್ಲೆಯ ೧೩೧ ಪರಿಶಿಷ್ಟ ಕಾಲೋನಿಗಳಲ್ಲಿ ಆಚರಿಸಲು ಸೂಚನೆ ಬಂದಿದೆ.ವಾರಪೂರ್ತಿ ಆಚರಿಸಲು ಅನುಮತಿ ಪಡೆದಿದ್ದೇವೆ. ಬಿಜೆಪಿ ಮೀಸಲು ವಿರೋಧಿ ಎಂಬ ಪ್ರತಿಪಕ್ಷಗಳು ಬಿಂಬಿಸುತ್ತಿರುವುದರಿಂದ ಜನತೆಗೆ ನಿಜಾಂಶ ತಿಳಿಸಿ ಅವರ ಒಲವು ಗಳಿಸಬೇಕು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಎಸ್.ಎನ್. ಶ್ರೀರಾಮ್ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ಮೋದಿ, ರಾಜ್ಯದಲ್ಲಿ ಸಿಎಂ  ಬಿಎಸ್ ವೈ ರೂಪಿಸಿರುವ ಯೋಜನೆಯನ್ನು ಜನರಿಗೆ ತಿಳಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಮಾಜಿ ಅಧ್ಯಕ್ಷ ಬಿಪಿ. ವೆಂಕಟಮುನಿಯಪ್ಪ, ಈ ಬಾರಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಧೈರ್ಯವಾಗಿ ಕೆಲಸ ಮಾಡಬಹುದು. ನಾಯಕರು ಇದ್ದಾರೆ. ಪ್ರತಿ ತಾಲೂಕಿನಲ್ಲಿ ಜಿಪಂನಲ್ಲಿ ೩ ರಿಂದ ೪ ಸದಸ್ಯರನ್ನು ಗೆದ್ದರೆ ಆಡಳಿತ ಹಿಡಿಯಬಹುದು ಎಂದರು.
ಸಭೆಯಲ್ಲಿ ಮಾಜಿ ಪ್ರಧಾನ  ಕಾರ್ಯದರ್ಶಿ ವಾಸು, ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ಉಸ್ತುವಾರಿ ಹೇಮಾರೆಡ್ಡಿ, ಜಿಪಂ ಸದಸ್ಯರಾದ ಅಶ್ವಿನಿ, ಮಹೇಶ್, ಜಯಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss