ಕೊಲೆ ಬೆದರಿಕೆ ಹಾಕಿದ ಮೂವರಿಗೆ ಜೀವಾವಧಿ ಶಿಕ್ಷೆ: 79,500 ದಂಡ

ಹೊಸದಿಗಂತ ವರದಿ ವಿಜಯಪುರ:

ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿ ಆತನ ಹತ್ತಿರವಿದ್ದ ಹಣ ಹಾಗೂ ಎಟಿಎಂ ಕಾರ್ಡ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದ ಮೂವರು ಆರೋಪಿಗಳಿಗೆ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 79,500 ದಂಡ ವಿಧಿಸಿ ತೀರ್ಪು ನೀಡಿದೆ.

ಆರೋಪಿಗಳಾದ ಶರಣಬಸು ಸಿದ್ದಪ್ಪ ದೇಗಿನಾಳ, ನಾನಾಗೌಡ ಶಿವಶರಣ ರಾಯಗುಂಡ, ಮುದಕಪ್ಪ ಊರ್ಫ್ ಚಂದ್ರಾಮ ಸಿದ್ದಲಿಂಗ ದೊಡ್ಡಮನಿ ಶಿಕ್ಷೆಗೆ ಗುರಿಯಾದವರು.

ಜಿಲ್ಲೆಯಲ್ಲಿ ಜು.30, 2011 ರಂದು ಸಿಂದಗಿಯಿಂದ ಕಲಕೇರಿಗೆ ಹೊರಟಿದ್ದ ಮಲ್ಲಿಕಾರ್ಜುನ ದತ್ತಪ್ಪ ಕೆರಕಿ ಎಂಬುವರನ್ನು ಚಾಕು ತೋರಿಸಿ, ಅಪರಹರಿಸಿಕೊಂಡು ಹೋಗಿದ್ದರು. ಮಲ್ಲಿಕಾರ್ಜುನ ಬಳಿಯಿದ್ದ 3500 ರೂಪಾಯಿ, ಯುನಿಯನ್ ಬ್ಯಾಂಕ್ ಎಟಿಎಂ ಕಾರ್ಡ್ ಮತ್ತು ಕೆನರಾ ಬ್ಯಾಂಕ್‌ನ ಒಂದು ಎಟಿಎಂ, ಮೊಬೈಲ್ ಹಾಗೂ ಮೋಟರ್ ಸೈಕಲ್ ಆರ್‌ಸಿ ಕಾರ್ಡ್ ತೆಗೆದುಕೊಂಡಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಸತೀಶ ಎಲ್‌ಪಿ, ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 79,500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!